ಬೆಂಗಳೂರು:ರಾಗಿಣಿ ಜೊತೆ ಫೋಟೋ ತೆಗೆಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು, ಫೋಟೋ ತೆಗೆಸಿಕೊಳ್ಳುವುದು, ಪ್ರಚಾರಕ್ಕೆ ಬರುವುದು ಅವರವರ ಅಭಿಪ್ರಾಯ ಎಂದು ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಪ್ರಕರಣ ಬೆಳಕಿಗೆ ಬರುವುದಕ್ಕೆ ಮುಂಚೆ ಇವರು ಆಪಾದಿತರಾಗಿರಲಿಲ್ಲ. ಈಗಲೂ ನ್ಯಾಯಾಲಯ ತೀರ್ಮಾನ ಮಾಡಬೇಕು. ಆಗ ಫೋಟೋ ತೆಗೆಸಿಕೊಂಡಿದ್ದು ತಪ್ಪು ಅಂತ ನಾನು ಹೇಳುವುದಿಲ್ಲ. ಅಪರಾಧಿಗಳ ಜೊತೆಗೆ ಗುರುತಿಸಿಕೊಳ್ಳುವುದು ತಪ್ಪು. ಅದನ್ನು ಖಂಡಿಸುತ್ತೇನೆ ಎಂದರು.
ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುತ್ತಿದ್ದೇವೆ ಎಂದ ಸಚಿವರು, ನನಗೆ ಗಾಳಿಯಲ್ಲಿ ಗುಂಡು ಹಾರಿಸುವುದಕ್ಕೆ ಇಷ್ಟವಿಲ್ಲ. ಪ್ರಶಾಂತ್ ಸಂಬರಗಿ, ಇಂದ್ರಜಿತ್ ಲಂಕೇಶ್ ಅವರು ಕೆಲವು ಮಾಹಿತಿ ನೀಡಿದ್ದಾರೆ. ಗೊತ್ತಿರುವವರು ಮಾಹಿತಿ ನೀಡಬಹುದು. ಯಾರೂ ಸಹ ಗಾಳಿಯಲ್ಲಿ ಗುಂಡು ಹಾರಿಸಬಾರದು. ಯಾರು ಯಾರು ಇದ್ದಾರೆ ಎಂದು ಹೇಳಬೇಕು ಎಂದು ಹೇಳಿದ್ರು.
ನನಗೂ ಡ್ರಗ್ಸ್ ಗೂ ಬಹಳ ದೂರ, ಆದರೂ ಬಹಳ ಜನ ನನ್ನ ಮೇಲೆ ಅಪಘಾತದ ಸಂದರ್ಭದಲ್ಲಿ ಕುಡಿದು ಕಾರು ಚಾಲನೆ ಮಾಡುತ್ತಿದ್ದರು ಅಂತ ಸುಳ್ಳು ಹೇಳಿದರು. ನಾನು ಕುಡಿಯುವವರ ಜೊತೆ ಸೇರುವುದಿಲ್ಲ. ನನಗೂ ಅದಕ್ಕೂ ಎಣ್ಣೆ ಸಿಗೇಕಾಯಿ ಎಂದರು.
ನನಗೆ ಗೊತ್ತಿಲ್ಲ ಚೆಂಡು ಹೂವಿನ ಗಿಡ ತೋರಿಸಿ ಇದೆ ತರಹ ಗಾಂಜಾ ಗಿಡ ಇರುತ್ತದೆ ಅಂತ ತೋರಿಸಿದರು. ಚೆಂಡು ಹೂವಿನ ಗಾಂಜಾ ಗಿಡದ ನಡುವಿನ ವ್ಯತ್ಯಾಸ ನನಗೆ ಗೊತ್ತಿಲ್ಲ. ಗೊತ್ತಿರುವವರು ಶ್ರೀಲಂಕಾ, ಮಲೆಶೀಯಾಗೆ ಹೋಗುವವರು, ನಟಿಯ ಜೊತೆ ಸಂಬಂಧ ಇರುವವರಿಗೆ ಗೊತ್ತಿರುತ್ತದೆ ಎಂದು ಪರೋಕ್ಷವಾಗಿ ಹೇಳಿದರು.
ಹವಾಲ ಹಣ ಏಳು ಕೋಟಿಗೂ ಹೆಚ್ಚು ವರ್ಗಾವಣೆ ಆಗುತ್ತದೆ ಎಂದು ಸಂಬರಗಿ ಹೇಳಿದ್ದಾರೆ. ಅದರ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಇಡಿ ತನಿಖೆ ಕೂಡ ಮಾಡಬೇಕಾಗುತ್ತದೆ. ಭಯೋತ್ಪಾದನೆಯ ನಂಟು ಇದೆಯೇ ? ಎಂಬುದರ ಬಗ್ಗೆಯೂ ನೋಡಬೇಕಿದೆ ಎಂದರು.