ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸರ್ಕಾರ ಪರಿಹಾರವಾಗಿ ವಿವಿಧ ಇಲಾಖೆಗಳನ್ನು ವಿಲೀನ ಮಾಡಲು ಮುಂದಾಗಿದ್ದು ಸಚಿವ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮದೇ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಕೂಡ ಸಾಕಷ್ಟು ಹುದ್ದೆಗಳ ಕೊರತೆಯಿದೆ. ವಿವಿಧ ಇಲಾಖೆಗಳನ್ನು ವಿಲೀನ ಮಾಡುವುದರಿಂದ ಈ ಕೊರತೆ ನಿವಾರಣೆಯಾಗಲಿದೆ. ಜೊತೆಗೆ ಅನಗತ್ಯ ಹುದ್ದೆಗಳೂ ಕಡಿಮೆಯಾಗಲಿವೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗುತ್ತದೆ. ಇಲಾಖೆಯ ಕಾರ್ಯನಿರ್ವಹಣೆ ಕೂಡ ಇನ್ನಷ್ಟು ಸುಗಮವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
1,768 ಹುದ್ದೆಗಳು ನಾಲ್ಕು ಇಲಾಖೆಯಡಿ ಮಂಜೂರಾಗಿವೆ. ಇವುಗಳಲ್ಲಿ 865 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 903 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಶೇ.60ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಪ್ರವಾಸೋದ್ಯಮ, ಪ್ರಾಚ್ಯ ವಸ್ತು, ಕನ್ನಡ ಸಂಸ್ಕೃತಿ, ಪತ್ರಾಗಾರ, ಗೆಜೆಟೆಡ್, ಯುವ ಸಬಲೀಕರಣ ಮತ್ತು ಕ್ರೀಡಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಹುದ್ದೆ ಮಂಜೂರು ಹಾಗೂ ಇರುವ ಹಾಗೂ ಹಾಲಿ ಇರುವ ಸ್ಥಾನಗಳ ವಿವರ ನೀಡಿದ ಸಚಿವ ರವಿ, ಇರುವ ಸಮಸ್ಯೆ ನಿವಾರಣೆಗೆ ಇವುಗಳನ್ನೆಲ್ಲ ಪುನರ್ರಚನೆ ಮಾಡಿದರೆ ಸಾಧಕ-ಬಾಧಕಗಳನ್ನು ಅರಿಯಬಹುದು. ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬ ಸಲಹೆ ಸರ್ಕಾರಕ್ಕೆ ನೀಡಿದ್ದೇವೆ ಎಂದರು.
ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿರುವ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಇಲಾಖೆಯ ವಿಲೀನ ವಿಚಾರವಾಗಿ ಈಗಾಗಲೇ ಚರ್ಚಿಸಿದ್ದಾರೆ. ಈ ಹಿಂದೆ ವಾರ್ತಾ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಒಂದೇ ಸೆಕ್ರೆಟರಿಯೇಟ್ ಅಡಿ ಬರುತ್ತಿದ್ದವು. ಇದೀಗ ನಾವು ಇದಕ್ಕೆ ಕ್ರೀಡಾ ಮತ್ತು ಯುವಜನ ಖಾತೆಯನ್ನು ಸೇರಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೇವೆ.
ಹಿಂದೆಲ್ಲ 70-82 ಖಾತೆಗಳಿದ್ದವು. ಲಾಟರಿಗೂ ಪ್ರತ್ಯೇಕ ಖಾತೆ ಹಾಗೂ ಸಚಿವರಿದ್ದರು. ಅನಗತ್ಯ ಖಾತೆಗಳು ಹಾಗೂ ಸಿಬ್ಬಂದಿಯನ್ನು ಕಡಿತಗೊಳಿಸಿದರೆ ಅನಗತ್ಯ ವೆಚ್ಚ ಕೂಡ ಕಡಿಮೆಯಾಗಲಿದೆ. ಇದೇ ರೀತಿ ಸರ್ಕಾರ ಇನ್ನೂ ಹಲವು ಇಲಾಖೆಗಳನ್ನು ಪರಸ್ಪರ ವಿಲೀನಗೊಳಿಸಲು ನಾವು ಶಿಫಾರಸು ಮಾಡಿದ್ದೇವೆ ಎಂದು ಇಲಾಖೆಯ ವಿವರ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಒಂದಿಷ್ಟು ನಿರ್ಬಂಧ ವಿಧಿಸಿದ್ದರು. ಇದು ಆಗದಿದ್ದಲ್ಲಿ ಈಗ ಖಾತೆಯ ವಿಚಾರವನ್ನು ಹೊರತುಪಡಿಸಿದರೆ ಬೇರೆ ಇನ್ನಾವ ಭಿನ್ನಮತವೂ ಇರುತ್ತಲೇ ಇರಲಿಲ್ಲ ಎಂದರು.