ಬೆಂಗಳೂರು: ಪಾದರಾಯನಪುರ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶದ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಪೊಲೀಸರಿಂದ ಆಗದೇ ಇದ್ದಲ್ಲಿ ಕೇಂದ್ರೀಯ ಮೀಸಲು ಪಡೆಯನ್ನು ಕರೆಸಿ ಗಲಭೆಕೋರರನ್ನು ನಿಯಂತ್ರಿಸಬೇಕು ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಪಾದರಾಯನಪುರದಲ್ಲಿ ಕ್ವಾರಂಟೈನ್ಗೆ ಒಳಪಡಿಸಲು ತೆರಳಿದ್ದ ವೇಳೆ ದೌರ್ಜನ್ಯ ನಡೆಸಿ ತಾತ್ಕಾಲಿಕ ಪೊಲೀಸ್ ಔಟ್ ಪೋಸ್ಟ್ ಧ್ವಂಸಗೊಳಿಸಿ ಕೆಲವರು ಪುಂಡಾಟ ನಡೆಸಿದ್ದಾರೆ. ಅಂತಹವರಿಗೆ ಕನಿಕರ ತೋರಿಸುವ ಅವಶ್ಯಕತೆ ಇಲ್ಲ. ಸರಿಯಾದ ಪಾಠ ಕಲಿಸಬೇಕು. ಸಾದಿಕ್ ಪಾಳ್ಯದಲ್ಲಿ ಘಟನೆ ನಡೆದಾಗ ಅವರನ್ನು ಸಮರ್ಥಿಸಿಕೊಂಡಿದ್ದರು. ಅನುಮತಿ ಪತ್ರ ತಗೊಂಡು ಹೋಗಿದ್ದರಾ ಎಂದು ಪ್ರಶ್ನಿಸಿದ್ದರು. ಆದರೆ ಬೇರೆ ದೇಶಕ್ಕೆ ಹೋಗಲು ಅನುಮತಿ ಬೇಕೇ ಹೊರತು, ನಮ್ಮಲ್ಲಿನ ಒಂದು ಪ್ರದೇಶಕ್ಕೆ ಹೋಗಲು ಅಲ್ಲವೆಂದು ಶಾಸಕ ಜಮೀರ್ ಅಹ್ಮದ್ಗೆ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿತು. ಆಸ್ತಿ ಮುಟ್ಟುಗೋಲು ಹಾಕಿಕೊಂಡು ಗೂಂಡಾ ಕಾಯ್ದೆಯಡಿ ಮಟ್ಟ ಹಾಕಿತು. ಹಾಗಾಗಿ ಉತ್ತರ ಪ್ರದೇಶದಲ್ಲಿ ಗಲಭೆ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ ಎಂದು ಸಚಿವ ರವಿ ತಿಳಿಸಿದರು.
ಎನ್ಎಸ್ಎ ಯಂತಹ ಕಠಿಣ ಕ್ರಮ ಕೈಗೊಂಡು ಗಲಭೆಕೋರರ ಹೆಡೆಮುರಿ ಕಟ್ಟಬೇಕು. ಒಂದು ಏರಿಯಾದ ಪುಂಡರ ನಿಯಂತ್ರಿಸುವ ಸಾಮರ್ಥ್ಯ ಇಲ್ಲ ಎಂದರೆ ಇನ್ನೇನು ಆಡಳಿತ ಮಾಡಲಿದ್ದಾರೆ ಎಂದು ಜನ ಪ್ರಶ್ನಿಸುತ್ತಾರೆ. ಜುಬಿಲಂಟ್ ಕಾರ್ಖಾನೆ, ತಬ್ಲಿಘಿ ನಂಟು ಶೇ. 50 ರಷ್ಟು ಕೊರೊನಾ ಪ್ರಕರಣಗಳಿಗೆ ಕಾರಣ ಎಂದು ಆರೋಪಿಸಿದರು.
ಪ್ರತಿದಿನ ರಾಜ್ಯದಲ್ಲಿ ಲಾಕ್ಡೌನ್ನಿಂದ 1500-1700 ಕೋಟಿ ನಷ್ಟವಾಗುತ್ತಿದೆ. ಸಿಎಂ ಸಂಯಮದಿಂದ ವರ್ತಿಸುತ್ತಿರುವುದು ದೌರ್ಬಲ್ಯ ಎಂದು ಭಾವಿಸಿದಂತಿದೆ. ಯಾವುದರ ಮೂಲಕ ಉತ್ತರ ನೀಡಬೇಕೋ ಹಾಗೇ ನೀಡಬೇಕು. ಯುಪಿಗೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಂಡರೂ ತೊಂದರೆ ಇಲ್ಲ. ಸಿಎಂ ಅವರ ಉದಾರತೆಯನ್ನು, ಸಂಯಮದ ಮಾತನ್ನು ಪುಂಡಾಟಕ್ಕೆ ಕೊಟ್ಟ ಲೈಸೆನ್ಸ್ ಎಂದು ಕೆಲವರು ಭಾವಿಸಿದ್ದಾರೆ. ಇಂತಹವರಿಗೆ ಸಂಯಮ ತೋರುವ ಅಗತ್ಯವಿಲ್ಲ. ರಾಜ್ಯದ ಪೊಲೀಸರಿಗೆ ಸಾಮರ್ಥ್ಯ ಇದೆ. ಇಲ್ಲದೇ ಇದ್ದಲ್ಲಿ ಸಿಆರ್ಎಫ್ಸಿ ಕರೆಸಿ ಪರಿಸ್ಥಿತಿ ತಿಳಿಗೊಳಿಸುತ್ತೇವೆ ಎಂದು ಸಚಿವ ಸಿ ಟಿ ರವಿ ಖಡಕ್ ಎಚ್ಚರಿಕೆ ರವಾನಿಸಿದರು.
ಪಾದರಾಯನಪುರದ ಗಲಭೆಯಲ್ಲಿ ಯಾರ ಪಾತ್ರವಿದೆ ಎನ್ನುವ ಬಗ್ಗೆ ತನಿಖೆ ಆಗಬೇಕು. ಶಾಸಕ ಜಮೀರ್ ಪಾತ್ರ ಇದ್ದರೂ ಕ್ರಮ ಆಗಬೇಕು. ಬೇರೆ ಯಾರದ್ದೇ ಪಾತ್ರ ಇದ್ದರೂ ಕ್ರಮ ಆಗಬೇಕು ಎಂದು ಸಚಿವರು ಆಗ್ರಹಿಸಿದರು.