ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆತಂಕ ಎದುರಾಗಿದೆ. ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದು, ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಅವರ ಬಗ್ಗೆ ಅಯ್ಯೋ ಪಾಪ ಅನಿಸುತ್ತದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ರಾಮನಗರ, ಚನ್ನಪಟ್ಟಣ ಎರಡು ನನಗೆ ಕಣ್ಣುಗಳು ಇದ್ದಂತೆ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು. ಪಾಪ ಕುಮಾರಸ್ವಾಮಿ ಆಗಾಗ್ಗೆ ಈ ರೀತಿ ಹೇಳುತ್ತಲೇ ಇರುತ್ತಾರೆ. ಮೊದಲು ಬಿಜೆಪಿಯನ್ನು ಪ್ರೀತಿ ಮಾಡುತ್ತಿದ್ದರು. ಈಗ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡುತ್ತಾರೆ. ಅವರ ಜತೆ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಬಾರದು ಎಂದು ನಮ್ಮ ನಾಯಕರಿಗೆ ಹೇಳಿದ್ದೆ. ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ ಎಂದರು.
ಓದಿ: ಜಾರಕಿಹೊಳಿ ನಿವಾಸದಲ್ಲಿ ರೇಣುಕಾಚಾರ್ಯ & ಟೀಂ ಸಭೆ; ಭೋಜನ ಕೂಟದ ನೆಪದಲ್ಲಿ ಅತೃಪ್ತರ ಮೀಟಿಂಗ್?
ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕೆಲಸ ಮಾಡಲಿಲ್ಲ. ಈಗ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದಾರೆ. ಸಚಿವರ ಮನೆಗಳಿಗೆ ಓಡಾಡುತ್ತಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನೆಗೂ ಹೋಗಿದ್ದರು ಎಂದು ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಸಮಾನ ಶತ್ರುಗಳು. ನಾನು ಸಚಿವನಾಗಿರುವುದರಿಂದ ಅವರಿಗೆ ಭಯ ಶುರು ಆಗಿದೆ ಎಂದು ಹೇಳಿದರು.
ಖಾತೆ ಬಗ್ಗೆ ಖುಷಿ ಇದೆ: ಮುಖ್ಯಮಂತ್ರಿಗಳು ನೀಡಿರುವ ಖಾತೆ ಬಗ್ಗೆ ಖುಷಿ ಇದೆ. ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವನು. ನೀರಾವರಿ ಇಲಾಖೆ ನನಗೆ ಇಷ್ಟವಾದ ಖಾತೆ. ನನಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನೀರಾವರಿ ವಿಚಾರದಲ್ಲಿ ನಮ್ಮ ತಾಲೂಕು ಇಡೀ ರಾಜ್ಯಕ್ಕೆ ಮಾದರಿ ಎಂದರು.