ಬೆಂಗಳೂರು : ನಾವು ಪರೀಕ್ಷೆ ಬರೆದಿದ್ದೇವೆ. ಇದೀಗ ಫಲಿತಾಂಶಕ್ಕೋಸ್ಕರ ಕಾಯ್ದಿದ್ದೇವೆ. ಕೆಲವೊಂದಿಷ್ಟು ಸಮಸ್ಯೆಗಳಿದ್ದವು. ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇವೆ. ಆ ರಿಸಲ್ಟ್ ಬರಬೇಕಲ್ಲ. ಬಂದಾಗ ನೋಡೋಣ ಎಂದು ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮುಖ್ಯಮಂತ್ರಿಗಳ ಬಗ್ಗೆ ನನಗೆ ಗೌರವವಿದೆ. ಅವರು ಇನ್ನು ಎರಡು ವರ್ಷ ಇರಲಿ, ತಪ್ಪೇನು? ನಮ್ಮ ನೋವು, ಸಮಸ್ಯೆ ಮೊದಲೇ ಹೇಳಿದ್ದೇನೆ ಎಂದರು. ಇದೇ ವೇಳೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಬೇಕು. ಇದನ್ನ ನಾವು ಎಲ್ಲಿ ಹೇಳಬೇಕೋ ಹೇಳಿದ್ದೇವೆ. ಅವರ ಬಗ್ಗೆ ನಿರ್ಧಾರ ಮಾಡುತ್ತಾರೆ. ನಮ್ಮ ಹಿರಿಯರು ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಅವರ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದರು.
ನನಗೆ ಯಾವುದೇ ಉಸ್ತುವಾರಿ ಕೊಟ್ಟಿಲ್ಲ. ಕೋಲಾರಕ್ಕೆ ಅರವಿಂದ ಲಿಂಬಾವಳಿಗೆ ನೀಡಿದ್ದಾರೆ. ಉಸ್ತುವಾರಿ ಕೊಡುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ರಾಜ್ಯದಲ್ಲಿನ ಪ್ರವಾಸಿ ತಾಣ ಓಪನ್ ಮಾಡುತ್ತೇವೆ. ಕೋವಿಡ್ ಮಾರ್ಗಸೂಚಿ ಅಳವಡಿಸಿಕೊಂಡು ಪ್ರವಾಸೋದ್ಯಮಕ್ಕೆ ಅನುವು ಮಾಡಲಾಗುವುದು. ಜಂಗಲ್ ಲಾಡ್ಜ್ ಸಹ ಓಪನ್ ಮಾಡಲಾಗುವುದು ಎಂದರು.
ಮುಂದಿನ ವಾರದಿಂದ ಪ್ರವಾಸೋದ್ಯಮ ಆರಂಭ
ಮುಂದಿನ ವಾರದಿಂದ ಪ್ರವಾಸೋದ್ಯಮ ಓಪನ್ ಮಾಡಲಾಗುವುದು ಎಂದಿರುವ ಸಚಿವರು, ಅದಕ್ಕಾಗಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದರು. ಪ್ರವಾಸೋದ್ಯಮ ವಲಯಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಹಣ ನೀಡಿದರೆ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಮತ್ತಷ್ಟು ವೃದ್ಧಿಪಡಿಸಬಹುದು ಹಾಗೂ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು. ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಕಡಿಮೆ ಅನುದಾನ ಒದಗಿಸಲಾಗಿದೆ. ಹೀಗಾಗಿ, ನಾನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ ಮಾಡೆಲ್)ದಲ್ಲಿ ಹಲವು ಯೋಜನೆ ಅನುಷ್ಠಾನಗೊಳಿಸಲು ಮಾತುಕತೆ ನಡೆಸಿದ್ದೇನೆ ಎಂದರು.
ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಇಂಧನ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಪ್ರತಿ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಟೆಂಡರ್ಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೂ ಹೆಚ್ಚಿನ ಹಣ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಆರಂಭವಾದ ನಂತರ ದೇಶದ ಪ್ರತಿಷ್ಠಿತ ಮೂರು ವಿಮಾನ ನಿಲ್ದಾಣಗಳ ಪಟ್ಟಿಗೆ ಬೆಂಗಳೂರು ವಿಮಾನ ನಿಲ್ದಾಣ ಸೇರಲಿದೆ. ಸು೦ದರ ಕಡಲ ಕಿಲಾರೆ, ಪ್ರಕೃತಿ ಸಂಪತ್ತು ಪುರಾಣ ಪ್ರಸಿದ್ಧ ದೇವಾಲಯಗಳು, ನದಿ ಹಾಗೂ ಜಲಾಶಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ ಎಂದರು.
ಶೇ.50ರಷ್ಟು ತೆರಿಗೆ ವಿನಾಯಿತಿ; ಹೋಟೆಲ್, ರೆಸಾರ್ಟ್ ವಿದ್ಯುತ್ ಬಿಲ್ ಮನ್ನಾ
ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ವರ್ಗೀಕೃತ ಸ್ಟಾರ್ ಹೋಟೆಲ್ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಲಾಗಿದೆ. 2021-25ನೇ ಸಾಲಿನ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ ಶೇ.50ರಷ್ಟು ಆಸ್ತಿ ತೆರಿಗೆಯನ್ನು ಮನ್ನಾ ಮಾಡಲಾಗಿದೆ. ಮೂರು ತಿಂಗಳ ವಿದ್ಯುಚ್ಛಕ್ತಿ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ.
ಅಬಕಾರಿ ಸನ್ನದು ಶುಲ್ಕ ಶೇ.50ರಷ್ಟು ಮೊತ್ತವನ್ನು ಪಾವತಿಸಿ 5.50ರಷ್ಟು ಶುಲ್ಕ ಮೊತ್ತವನ್ನು ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಉಳಿದ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿ ಬ್ಯಾಂಕ್ ಖಾತೆಗೆ 5000 ರೂ. ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.