ಬೆಂಗಳೂರು : ಡಿ ಕೆ ಶಿವಕುಮಾರ್ ಬಹಳ ಬಿಲ್ಡಪ್ ಕೊಡುತ್ತಿದ್ದರು. ಆದರೆ, ಒಂದು ಹೆಣ್ಣು ಮಗಳಿಂದ ಅವರಿಗೆ ಈಗ ಶೇಪ್‌ಔಟ್ ಆಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ನೀಡಿದರು. ಅರಮನೆ ಮೈದಾನದಲ್ಲಿ ಲಿಡ್ಕರ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾಜಿ ಸಂಸದೆ ರಮ್ಯಾ ಕಿಡಿ ವಿಚಾರವಾಗಿ ಅವರು ಮಾತನಾಡಿದರು.
ಡಿ.ಕೆ. ಶಿವಕುಮಾರ್ ತಾನು ಯಾರಿಗೆ ಬೇಕಾದರೂ ನೋಡಿಕೊಳ್ಳುತ್ತೇನೆ ಎಂದು ಬಿಲ್ಡಪ್ ಕೊಡುತ್ತಿದ್ದರು. ಆದರೆ, ಈಗ ಅವರಿಗೆಯೇ ಶೇಪ್‌ಔಟ್ ಆಗಿದೆ. ಆದರೆ, ರಮ್ಯಾ ಟ್ವೀಟ್ ಬಳಿಕವೂ ಸಾಕಷ್ಟು ಕಾಂಗ್ರೆಸ್ ನಾಯಕರು ಅವರಿಗೆ ಟೀಕೆ ಮಾಡಿದ್ದಾರೆ ಎಂದು ಕುಟುಕಿದರು. ಇಂಥವರು ನಮ್ಮ ಅಧ್ಯಕ್ಷರಾ ಎಂದು ಕಾಂಗ್ರೆಸ್ನವರು ಮುಜುಗರ ಅನುಭವಿಸುತ್ತಿದ್ದಾರೆ. ಅಶ್ವತ್ಥ್ ನಾರಾಯಣನ ಗೌರವ ಹಾಳು ಮಾಡುತ್ತೇನೆ ಎಂದು ಹೊರಟಿದ್ದರು. ಆದರೆ, ಈಗ ಅವರೇ ಗೌರವ ಕಳೆದುಕೊಂಡು ಆಗಿ ಐಸೋಲೇಟ್ ಆಗಿದ್ದಾರೆ. ರಮ್ಯಾ ಪಾಪ ಹೆಣ್ಣು ಮಗಳು, ಅವರ ಬಗ್ಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಕುಟುಕಿದರು.
ಅಯ್ಯೋ ಪಾಪ ಎನ್ನುವ ಪರಿಸ್ಥಿತಿ : ಇದು ಕಾಂಗ್ರೆಸ್ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಿ. ಡಿ.ಕೆ. ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು. ನನ್ನನ್ನು ಟಚ್ ಮಾಡಿಕೊಂಡು ಅಯ್ಯೋ ಪಾಪ ಎನ್ನುವ ಪರಿಸ್ಥಿತಿ ಡಿ.ಕೆ. ಶಿವಕುಮಾರ್ಗೆ ಬಂದಿದೆ. ಎಂತಹ ವ್ಯಕ್ತಿ ಅಧ್ಯಕ್ಷರಾಗಿದ್ದಾರಪ್ಪ ಎನ್ನುವ ಮುಜುಗರ ಕಾಂಗ್ರೆಸ್ ನಾಯಕರಿಗೆ ಆಗಿದೆ. ಅನುಕಂಪ ಒಳ್ಳೆಯವರ ಮೇಲೆ ಹಾಗೂ ಸಜ್ಜನರ ಮೇಲೆ ಇರುತ್ತದೆ. ಡಿ.ಕೆ. ಶಿವಕುಮಾರ್ ಅಂಥವರ ಮೇಲಲ್ಲ ಎಂದು ವ್ಯಂಗ್ಯವಾಡಿದರು.
ಕೀಳುಮಟ್ಟಕ್ಕೆ ಇಳಿದ ಶಿವಕುಮಾರ್: ಅವರದೇ ಪಕ್ಷದ ಹೆಣ್ಣು ಮಗಳ ತೇಜೋವಧೆ ಮಾಡಿದರೆ ಏನಾಗುತ್ತೆ ಎನ್ನುವ ಬಿಸಿ ಶಿವಕುಮಾರ್ಗೆ ಆಗಿದೆ. ವ್ಯಕ್ತಿಯ ಸ್ವಾತಂತ್ರ್ಯ, ಪರಸ್ಪರ ಸಂಬಂಧ, ಸ್ನೇಹ ಪ್ರಶ್ನಿಸುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರ ಬಗ್ಗೆ ಅವರದೇ ಎಲ್ಲ ನಾಯಕರು ಸಂಪೂರ್ಣ ಖಂಡಿಸಿದ್ದಾರೆ.
ಏನೋ ಆಪಾದನೆ ಮಾಡಬೇಕು, ಅದಕ್ಕೊಂದು ಅರ್ಥ ಕಲ್ಪಿಸಿ ದಿಕ್ಕು ತಪ್ಪಿಸಬೇಕು ಅಂತಾ ಹೊರಟಿದ್ದವರಿಗೆ ಅವರ ಪಕ್ಷದವರೇ ತಕ್ಕ ಪಾಠ ಕಲಿಸಿದ್ದಾರೆ. ಇನ್ಮುಂದೆ ಶಿವಕುಮಾರ್ ಇಂತಹ ಮಾತು ಮಾತನಾಡಲ್ಲ ಅಂತಾ ಅನಿಸುತ್ತದೆ. ಈ ರೀತಿಯ ಹೇಳಿಕೆಯ ಮೂಲಕ ಅವರ ವ್ಯಕ್ತಿತ್ವ, ಮನೋಭಾವ ಏನು ಎನ್ನುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹೀಗಾಗಿ, ನನಗೆ ಸಂತೋಷ ಆಗಿದೆ ಎಂದರು.