ಬೆಂಗಳೂರು: ರಾಜಕಾರಣಕ್ಕಾಗಿ ಕೆಲವರನ್ನು ತುಷ್ಟೀಕರಣ ಮಾಡಲು ಆರ್ಎಸ್ಎಸ್ ಅನ್ನು ದೂಷಿಸುವುದು ಕೆಲವು ರಾಜಕಾರಣಿಗಳ ಚಾಳಿಯಾಗಿದೆ. ಈಗ ಉಪಚುನಾವಣೆಗಳು ಹತ್ತಿರವಿರುವುದರಿಂದ ಕುಮಾರಸ್ವಾಮಿಯವರಿಗೂ ಈ ಚಾಳಿ ಕಾಡುತ್ತಿರಬಹುದು ಎಂದು ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
'ಕುಮಾರಸ್ವಾಮಿಯವರೇ, ಆರ್ಎಸ್ಎಸ್ ಕೊಟ್ಯಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆಯೇ ವಿನಹ, ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ.
ಆರ್ಎಸ್ಎಸ್ ಈ ದೇಶದ ದೊಡ್ಡ ಅಪ್ರತಿಮ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಎಷ್ಟೋ ಮಂದಿ ಯಾವುದೇ ಚುನಾವಣಾ ರಾಜಕೀಯಕ್ಕೆ ಆಗಲಿ ಅಥವಾ ಅಧಿಕಾರಕ್ಕಾಗಲಿ ಗಂಟು ಬಿದ್ದಿಲ್ಲ ಎಂಬುದು ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಆರ್ಎಸ್ಎಸ್ನ ಸೇವಾ ಮನೋಭಾವವನ್ನು ಹಿಂದೆ ಕುಮಾರಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಸ್ವತಹ ಮನಃಪೂರ್ತಿಯಾಗಿ ಪ್ರಶಂಸಿಸಿದ್ದರು ಎಂಬುವುದನ್ನು ಇವರು ನೆನಪು ಮಾಡಿಕೊಂಡರೆ ಸಾಕು ಎಂದು ಮಾಧ್ಯಮ ಹೇಳಿಕೆಯಲ್ಲಿ ಸಲಹೆ ಮಾಡಿದ್ದಾರೆ.