ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಕರ್ನಾಟಕವು ಪರಿಪೂರ್ಣ ವಿಕಸನ ಕಾಣಲಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಷ್ಟಿತ ಸ್ಥಾನಮಾನ ಗಳಿಸಲಿದೆ. ಇದಕ್ಕೆ ಶೃಂಗೇರಿ ಶಾರದಾ ಪೀಠದ ಹಿರಿಯ ಮತ್ತು ಕಿರಿಯ ಶ್ರೀಗಳ ಸಂಪೂರ್ಣ ಆಶೀರ್ವಾದ ಮತ್ತು ಮಾರ್ಗದರ್ಶನ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಶೃಂಗೇರಿ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ಸ್ವಾಮಿಗಳಿಗೆ ಭಾನುವಾರ ಏರ್ಪಡಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ, ಶೃಂಗೇರಿ ಪೀಠದ ಗುರುಗಳು ತಮ್ಮ ಅಧ್ಯಾತ್ಮಿಕ ಅರಿವಿನ ಬಲದಿಂದ ದೇಶದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತಾ ಬಂದಿದ್ದಾರೆ.
ಶಂಕರಾಚಾರ್ಯರ ಪರಂಪರೆಯು ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಬಿಜೆಪಿ ಸರ್ಕಾರ ದೇಶದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಣೆಗೆ ಕಟಿಬದ್ಧವಾಗಿ ದುಡಿಯುತ್ತಿದೆ. ಇದಕ್ಕಾಗಿ ನಾವೆಲ್ಲರೂ ಸಮರ್ಪಣಾ ಭಾವದಿಂದ ದುಡಿಯಲು ಸಿದ್ಧರಾಗಿದ್ದೇವೆ. ಪರಕೀಯರ ಆಳ್ವಿಕೆ ಮತ್ತು ಆಕ್ರಮಣಗಳು ಎದುರಾದಾಗಲೂ ಕೂಡ ಆತಂಕಕ್ಕೆ ಒಳಗಾಗದೆ ಧರ್ಮ ಸಂರಕ್ಷಣೆ ಮಾಡಿದ ಶ್ರೇಯಸ್ಸು ಶೃಂಗೇರಿ ಪೀಠದ್ದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕುಡುಪು ದೇವಾಲಯದಲ್ಲಿ ಅನ್ಯಧರ್ಮೀಯರಿಗೆ ಬಾಳೆ ಹಣ್ಣು ಟೆಂಡರ್: ಅವಧಿ ಮುಗಿಯುವ ವೇಳೆ ವಿವಾದ
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ವಿದ್ಯೆಗಳನ್ನು ಕಲಿಸಲು ಒತ್ತು ಕೊಡಲಾಗಿದೆ. ಇದರಿಂದ ಮುಂಬರುವ ತಲೆಮಾರುಗಳಲ್ಲಿ ಸಾಂಸ್ಕೃತಿಕ ಮನ್ವಂತರವೇ ಸೃಷ್ಟಿ ಆಗಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.