ಕೆಆರ್ಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಎಲ್ಲರಿಗೂ ದಾರಿದೀಪ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿ ಅಂಗವಾಗಿ ಬೆಂಗಳೂರು ಪೂರ್ವ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶ ಕಂಡ ಮಹಾನ್ ನಾಯಕ ಅಂಬೇಡ್ಕರ್. ಅವರ ನೆನಪಿಗಾಗಿ ಶಾಶ್ವತ ಕೆಲಸ ಮಾಡಬೇಕೆಂಬ ಉದ್ದೇಶದಿಂದ ತಾಲೂಕು ಕಚೇರಿ ಎದುರು ಅವರ ಪ್ರತಿಮೆ ನಿರ್ಮಾಣ ಮಾಡಿ ಪ್ರತಿ ವರ್ಷ ಹಬ್ಬದಂತೆ ಆಚರಣೆ ಮಾಡುತ್ತಿದ್ದೇವೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಚೇತನರಲ್ಲಿ ಒಬ್ಬರು. ನಮ್ಮ ದೇಶಕ್ಕೆ ಅವರ ಕೊಡುಗೆ ಅಪಾರ. ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟ ಮಹಾನಾಯಕ ನಡೆದು ಬಂದ ದಾರಿ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದ ಅವರು, ರಾಜಕೀಯ ಒತ್ತಡದಲ್ಲಿ ಎಷ್ಟೇ ಕೆಲಸವಿದ್ದರೂ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಮಾತ್ರ ಚಾಚೂ ತಪ್ಪದೇ ಆಚರಿಸುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಬೆ. ಪೂರ್ವ ತಾಲೂಕಿನಲ್ಲಿ ಎಲ್ಲಾ ಮುಖಂಡರು ಸೇರುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆದ್ಧೂರಿಯಾಗಿ ಆಚರಿಸಿ ಅವರ ಆದರ್ಶ ತತ್ವಗಳನ್ನು ಯುವ ಜನತೆಗೆ ತಿಳಿಸಿಕೊಡುವ ಕೆಲಸ ಮಾಡೋಣ ಎಂದರು.
ಓದಿ: ಪಾಲಿಕೆ ಚಿತಾಗಾರಗಳಲ್ಲಿ ಹೆಣ ಸುಡಲು ಕ್ಯೂ: ನೌಕರರಿಗೂ ಹೆಚ್ಚಿದ ಒತ್ತಡ