ಬೆಂಗಳೂರು: ಕಂಟೇನ್ಮೆಂಟ್ ಸ್ಥಳಗಳಲ್ಲಿ ಕೊರೊನಾ ಪರೀಕ್ಷಾ ಪ್ರಮಾಣ ಹೆಚ್ಚಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಹೂಡಿಯ ಖಾಸಗಿ ಹೋಟೆಲ್ನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಪ್ರಮಾಣದಲ್ಲಿ ಸರ್ಮಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಕೊರೊನಾ ಸೋಂಕು ಹರಡುವುದನ್ನು ತಡೆಯಲು ವಾರ್ಡ್ ಮಟ್ಟದಲ್ಲಿ ಸೂಕ್ತ ಕಾರ್ಯನಿರ್ವಹಣೆ ಮಾಡಬೇಕು.
ಕೋವಿಡ್ ಚಿಕಿತ್ಸೆ ನಿರಾಕರಣೆ, ನಿರ್ಲಕ್ಷ್ಯ, ಪ್ರವೇಶ ನೀಡದೇ ನೆಪಹೇಳಿ ಮನೆಗೆ ಕಳುಹಿಸುವ ಘಟನೆಗಳು ಮಹದೇವಪುರ ವಲಯದಲ್ಲಿ ನಡೆಯಬಾರದು. ಯಾವುದೇ ರೋಗಿಯು ಚಿಕಿತ್ಸೆ ಇಲ್ಲದೇ ಹಿಂತಿರುಗಬಾರದು. ಸರಿಯಾದ ರೀತಿ ಚಿಕಿತ್ಸೆ ನೀಡಲಿಲ್ಲ ಎಂದು ಹೇಳಬಾರದು. ಇದರಿಂದ ನಮ್ಮ ವಲಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.