ಬೆಂಗಳೂರು: ಒಳ್ಳೆಯ ಕಥೆ ಹಾಗೂ ನಟ ದರ್ಶನ್ ಕಾಲ್ಶೀಟ್ ಸಿಕ್ಕರೆ ಖಂಡಿತಾ ಸಿನಿಮಾ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗಾರರು, ತಮ್ಮ ನಿವಾಸಕ್ಕೆ ನಟ ದರ್ಶನ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಒಳ್ಳೆಯ ಕಥೆ ಸಿಕ್ಕರೆ ಮತ್ತು ದರ್ಶನ್ ಅವರ ಕಾಲ್ಶೀಟ್ ಸಿಕ್ಕರೆ ಖಂಡಿತಾ ಸಿನಿಮಾ ಮಾಡುತ್ತೇನೆ ಎಂದು ನಗುತ್ತಲೇ ಹೇಳಿದರು. ಆರ್ಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರ ಮಾಡಿದ್ದರು. ಆಗ ಅವರ ಜೊತೆ ನಾನು ಪ್ರಚಾರ ಮಾಡಿದ್ದೆ. ಹಾಗಾಗಿ ನಮ್ಮ ಮನೆಗೆ ಆಹ್ವಾನ ನೀಡಿದ್ದೆ, ಅವರು ಬಂದಿದ್ದರು. ಇದರಲ್ಲಿ ವಿಶೇಷ ಅರ್ಥ ಏನೂ ಇಲ್ಲ ಎಂದರು.
ಮಂತ್ರಿ ಮಂಡಲ ಪುನಾರಚನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಎಲ್ಲಾ ಶಾಸಕರು ಅರ್ಹರೆ. ಮಂತ್ರಿ ಮಾಡುವಂತೆ ಕೇಳುವುದು ತಪ್ಪಲ್ಲ. ಅಂತಿಮ ತೀರ್ಮಾನ ಸಿಎಂ ಹಾಗೂ ಹೈಕಮಾಂಡ್ ಮಾಡುತ್ತಾರೆ ಎಂದು ಈ ವಿಷಯದ ಬಗ್ಗೆ ಮಾತನಾಡಲು ಹಿಂದೇಟು ಹಾಕಿದರು.
ಡಿಕೆಶಿಗೆ ಟಾಂಗ್:
ಕೆಪಿಸಿಸಿ ಅಧ್ಯಕ್ಷರು ನನ್ನ ರಕ್ಷಣೆಗೆ ಬರುತ್ತಿಲ್ಲ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರ ರಕ್ಷಣೆಗೆ ಬರಬೇಕಿತ್ತು. ಅಖಂಡ ಶ್ರೀನಿವಾಸಮೂರ್ತಿ ದಲಿತ ಸಮುದಾಯದ ಶಾಸಕರು. ಮುಸಲ್ಮಾನರ ಮತಗಳು ಆ ಕ್ಷೇತ್ರದಲ್ಲಿ ಹೆಚ್ಚಿವೆ. ಅಖಂಡ ಶ್ರೀನಿವಾಸಮೂರ್ತಿ ಪಕ್ಷ ಬಿಟ್ಟು ಹೋಗಲಿ ಎಂಬ ಭಾವನೆ ಕಾಂಗ್ರೆಸ್ ಪಕ್ಷಕ್ಕೆ ಇರಬಹುದು. ಹೀಗಾಗಿ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಹೇಳಿದರು.