ಬೆಂಗಳೂರು: ರಾಜ್ಯದಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 13,91,136 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಶೇ. 60 - 40 ಅನುಪಾತದಲ್ಲಿ ರಾಜ್ಯದ 9 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಹಾವೇರಿ ಮತ್ತು ವಿಜಯಪುರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಗ್ರ ಬೆಳೆ ನಿರ್ವಹಣೆ, ಗುಚ್ಛ ಪ್ರಾತ್ಯಕ್ಷಿಕೆಗಳು, ಮೆಕ್ಕೆಜೋಳ ಬೆಳೆಯನ್ನು ಮುಖ್ಯ ಬೆಳೆಯಾಗಿ ಹಾಗೂ ಸೋಯಾಬಿನ್, ಹೆಸರು, ಅವರೆ, ಅಲಸಂದೆ, ಉದ್ದು ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತಿದೆ. ಸಮಗ್ರ ಕೃಷಿ ಅಭಿವೃದ್ಧಿ ಚಟುವಟಿಕೆಗಳಾದ ಪ್ರಮಾಣೀಕೃತ ಬೀಜ ವಿತರಣೆ, ಸಮಗ್ರ ಪೋಷಕಾಂಶ ವಿಚಾರಣೆ, ಸಮಗ್ರ ಪೀಡೆ ನಿರ್ವಹಣೆ, ಆಧುನಿಕ ಯಂತ್ರೋಪಕರಣಗಳ ವಿತರಣೆಗೆ ಸಹಾಯಧನ ನೀಡಲಾಗ್ತಿದೆ ಎಂದು ಎಂದರು.
ಬೆಳೆಗೆ ಕೇಂದ್ರ ಸರ್ಕಾರ ಎಂಎಸ್ಪಿ ದರ ನಿಗದಿಪಡಿಸಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020-21ನೇ ಸಾಲಿನಲ್ಲಿ ಎಫ್ಎಕ್ಯೂ ಗುಣಮಟ್ಟದ ಮೆಕ್ಕೆಜೋಳಕ್ಕೆ 1,850 ರೂ. ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿಲ್ಲ. ಹೀಗಾಗಿ ಇಲ್ಲಿ ಖರೀದಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.