ಬೆಂಗಳೂರು: ಹಿಜಾಬ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ಗೆ ಅಪೀಲು ಹೋಗುವ ಮೂಲಕ ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಭವನದಲ್ಲಿ ಮಾತನಾಡಿದ ಅವರು, ಇದರ ಹಿಂದೆ ಯಾರಿದ್ದಾರೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಕಾಂಗ್ರೆಸ್ನ ಯೂತ್ ಸಂಘಟನೆಯ ಅಧ್ಯಕ್ಷರು ಸುಪ್ರೀಂಕೋರ್ಟ್ ಹೋಗಿದ್ದಾರೆ. ಸುಪ್ರೀಂ ಕೋರ್ಟ್, ಸದ್ಯಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವಾಗ ನಾವು ಮಧ್ಯಪ್ರವೇಶ ಆಗಬೇಕು ಎಂಬುದು ನಮಗೆ ಗೊತ್ತಿದೆ. ಆವಾಗ ಆಗುತ್ತೇವೆ ಎಂದು ತಿಳಿಸಿದೆ. ಇಷ್ಟು ದಿನ ನಾವು ಮಧ್ಯಪ್ರವೇಶ ಮಾಡುತ್ತಿಲ್ಲ ಅಂತಿದ್ದರು. ಈಗ ಯಾರು ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ ಎಂದು ತಿಳಿಸಿದರು.
ವಿದೇಶಿಗರ ಕೈವಾಡದ ಅನುಮಾನ: ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ ನಿಷೇಧ ಆದಾಗಲೂ ಯಾರೂ ಪ್ರಶ್ನೆ ಮಾಡಿಲ್ಲ. ಪಾಕಿಸ್ತಾನದಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ಏಕೆ ಬಂದಿದೆ?. ಕೇರಳದಲ್ಲೂ ಹಿಜಾಬ್ ಬಗ್ಗೆ ಹೈಕೋರ್ಟ್ ಆದೇಶ ಆಗಿತ್ತು. ಆವಾಗ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವರದಿ ಮಾಡಿರಲಿಲ್ಲ. 2015ರಲ್ಲಿ ಮುಂಬೈ ಹೈಕೋರ್ಟ್ ಆದೇಶ ಬಂದಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರಲಿಲ್ಲ. ಈಗ ಏಕೆ ಆಗುತ್ತಿದೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹಿಜಾಬ್, ಬುರ್ಖಾ ಬ್ಯಾನ್ ಮಾಡಿಲ್ಲ. ಕೇವಲ ಶಾಲೆಯೊಳಗೆ ಸಮವಸ್ತ್ರ ಧರಿಸಬೇಕು ಅಂತಾ ಮಾತ್ರ ಹೇಳಿದ್ದೇವೆ. ಹೀಗಾಗಿ, ಇದರ ಹಿಂದೆ ವಿದೇಶಿಗರ ಕೈವಾಡದ ಅನುಮಾನ ಇದೆ. ಮೊದಲಿಗೆ ಕನ್ನಡ ಮಾಧ್ಯಮದಲ್ಲಿ ಎಲ್ಲೂ ಈ ವಿವಾದ ಸುದ್ದಿ ಆಗಿರಲಿಲ್ಲ. ಕೆಲ ದೆಹಲಿ ಮಾಧ್ಯಮಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಹೇಗೆ ಸಾಧ್ಯ ಎಂದು ಅನುಮಾನ ಹೊರ ಹಾಕಿದರು.
ಇದನ್ನೂ ಓದಿ: ಮುಂಬೈಗೂ ಕಾಲಿಟ್ಟ ಹಿಜಾಬ್ ವಿವಾದ : ಕಾಲೇಜ್ಗಳಲ್ಲಿ ದುಪಟ್ಟಾ, ಮುಸುಕು, ಬುರ್ಖಾ ನಿಷೇಧ
ಮಕ್ಕಳನ್ನು ಯಾವುದೇ ಕಾರಣಕ್ಕೆ ರಾಜಕೀಯ ಶಕ್ತಿಗಳು ಬಳಸಬಾರದು ಎಂಬ ಉದ್ದೇಶದಿಂದ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ನಿನ್ನೆ ಹೈಕೋರ್ಟ್ ಸಿಜೆ ಅವರು ಶಾಲೆಗಳನ್ನು ಶುರು ಮಾಡಲು ಹೇಳಿದ್ದಾರೆ. ಸರ್ಕಾರದ ಆದೇಶದಂತೆ ಸಮವಸ್ತ್ರ ನಿಯಮಕ್ಕೆ ಸೂಚಿಸಿದ್ದಾರೆ. ಹಿಜಾಬ್, ಕೇಸರಿ ಶಾಲು ಹಾಕಿ ಬರದಂತೆ ಹೇಳಿದ್ದಾರೆ. ಸೋಮವಾರದಿಂದ ಶಾಲೆಗಳು ಆರಂಭವಾಗಲಿದೆ. ಸೋಮವಾರ ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಆ ಸಭೆಯಲ್ಲಿ ಕಾಲೇಜುಗಳನ್ನು ತಕ್ಷಣದಿಂದ ಆರಂಭಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.