ಬೆಂಗಳೂರು : ಇಂದು ಕೂಡ ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಪರೇಡ್ ಮುಂದುವರೆದಿದೆ. ಶಾಸಕರಾದ ಬೆಳ್ಳಿ ಪ್ರಕಾಶ್, ಪರಣ್ಣ ಮುನವಳ್ಳಿ, ರೇಣುಕಾಚಾರ್ಯ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕಾಪು ಶಾಸಕ ಲಾಲ್‌ಜೀ ಮೆಂಡನ್ ಭೇಟಿ ನೀಡಿದ್ದು, ಈ ಬಾರಿ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವಸ್ಥಾನ ಆಕಾಂಕ್ಷಿಗಳ ಬೆಂಬಲಿಗರು ಬಿಎಸ್‌ವೈ ನಿವಾಸದೆದುರು ಪ್ರತಿಭಟನೆ ನಡೆಸಿರುವ ಘಟನೆಯೂ ನಡೆದಿದೆ.
ಪರಣ್ಣ ಮುನವಳ್ಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಮುನವಳ್ಳಿ ಬೆಂಬಲಿಗರು ಬಿಎಸ್‌ವೈಗೆ ಮನವಿ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಎರಡು ಸಲ ಅನ್ಯಾಯವಾಗಿದೆ. ಈ ಸಲ ಅನ್ಯಾಯ ಆಗದಂತೆ ಕ್ರಮವಹಿಸುವಂತೆ ವೀರಶೈವ ಲಿಂಗಾಯತರ ವೇದಿಕೆಯಿಂದ ಮನವಿ ಮಾಡಲಾಯಿತು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಅವಕಾಶ ನೀಡುವಂತೆ ಕಾವೇರಿ ನಿವಾಸದ ಬಳಿ ಮುನವಳ್ಳಿ ಬೆಂಬಲಿಗರು ಘೋಷಣೆ ಕೂಗಿದರು.
ಯಡಿಯೂರಪ್ಪ ನಿವಾಸದ ಬಳಿ ಶಾಸಕ ನೆಹರೂ ಓಲೆಕಾರ್ ಬೆಂಬಲಿಗರಿಂದ ಘೋಷಣೆ ಮೊಳಗಿತು. ನೆಹರೂ ಓಲೆಕಾರ್ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಆಗ್ರಹಿಸಿ ಕಾವೇರಿ ನಿವಾಸದೆದುರು ಪ್ರತಿಭಟನೆ ನಡೆಸಿದರು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಸಿಎಂ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸಿಎಂ ಹಾವೇರಿಗೆ ಆಗಮಿಸಿದರೆ ಅವರ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಬಿಎಸ್‌ವೈ ಕಾವೇರಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕಾಪು ಶಾಸಕ ಲಾಲ್‌ಜೀ ಮೆಂಡನ್ ಆಗಮಿಸಿ ಮಾತುಕತೆ ನಡೆಸಿದರು. ಬೊಮ್ಮಾಯಿ ಸಂಪುಟದಲ್ಲಿ ಸಚಿವಾಂಕ್ಷಿಗಳಾಗಿರುವ ರೇಣುಕಾಚಾರ್ಯ, ಹಾಲಪ್ಪ ಆಚಾರ್, ಲಾಲ್ ಜೀ ಮೆಂಡನ್ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಇಂದು ರಾತ್ರಿ ದೆಹಲಿಯಿಂದ ವಾಪಸ್ ಆಗೋ ಹಿನ್ನೆಲೆ ಶಾಸಕರೆಲ್ಲಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಬಿಎಸ್‌ವೈ ಅವರನ್ನು ಭೇಟಿಯಾಗಿ ಅವಕಾಶದ ನಿರೀಕ್ಷೆಯಲ್ಲಿ ನಿರ್ಗಮಿಸುತ್ತಿದ್ದಾರೆ.
ಓದಿ: ಮಂಡ್ಯ: ಸಿಗಲಿದೆಯೇ ಕೆ.ಸಿ. ನಾರಾಯಣಗೌಡರಿಗೆ ಮಂತ್ರಿಗಿರಿ..? ಉಸ್ತುವಾರಿ ಬದಲಾವಣೆ ಸಾಧ್ಯತೆ