ಬೆಂಗಳೂರು : ಕರ್ನಾಟಕ ಮತ್ತು ಮೊರಾಕ್ಕೊ ನಡುವೆ ಎರಡೂ ಕಡೆಯಿಂದ ನೇರ ವಿಮಾನ ಸಂಪರ್ಕ ಆರಂಭಿಸಿದರೆ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವೃದ್ಧಿಯಾಗುವ ಸದವಕಾಶವಿದೆ ಎಂದು ಐಟಿಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.
ಮೊರಾಕ್ಕೊದ ಹೂಡಿಕೆ ಮತ್ತು ರಫ್ತು ಅಭಿವೃದ್ಧಿ ಸಂಸ್ಥೆಯು ಬಂಡವಾಳ ಆಕರ್ಷಿಸಲು ಮೊರಾಕ್ಕೊ ನೌ ಉಪಕ್ರಮದಡಿ ನಗರದ ಖಾಸಗಿ ಹೋಟೆಲ್‌ನಲ್ಲಿ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ವೇಳೆ ಮಾತನಾಡಿದ ಸಚಿವರು, ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದ ನಗರವಾಗಿದೆ. ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಹೊಂದಿದೆ. ಕರ್ನಾಟಕ ಮತ್ತು ಮೊರಕ್ಕೊ ಇದರ ಪರಸ್ಪರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಮೊರಕ್ಕೊ ದೇಶವು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ದೆಹಲಿಯಲ್ಲಿ ರೋಡ್ ಶೋ ಹಮ್ಮಿಕೊಂಡಿದೆ. ರೋಡ್ ಶೋ ಸಲುವಾಗಿ ನಿಯೋಗ ಇಲ್ಲಿಗೆ ಭೇಟಿ ನೀಡಿತ್ತು. ಟಿಸಿಎಸ್, ಇನ್ಫೋಸಿಸ್, ವಿಪ್ರೊ ಸೇರಿದಂತೆ ಹಲವು ದಿಗ್ಗಜ ಐಟಿ ಕಂಪನಿಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಮೊರಾಕ್ಕೊ ರಾಷ್ಟ್ರವು ಭಾರತ ಮತ್ತು ಕರ್ನಾಟಕದಿಂದ ಹೂಡಿಕೆ ಆಕರ್ಷಿಸಲು ಬೆಂಗಳೂರಿನಿಂದ ತನ್ನ ರೋಡ್ ಶೋ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇದೇ ರೀತಿ ಉಳಿದ ರಾಷ್ಟ್ರಗಳು ಕೂಡ ಬೆಂಗಳೂರಿನಿಂದಲೇ ತಮ್ಮ ಹೂಡಿಕೆ ಉತ್ತೇಜನ ಉಪಕ್ರಮಗಳನ್ನು ಆರಂಭಿಸಬೇಕು ಎನ್ನುವುದು ರಾಜ್ಯದ ನಿರೀಕ್ಷೆಯಾಗಿದೆ ಎಂದರು.
ಮೊರಾಕ್ಕೊ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಪಾರ ಸಾಧ್ಯತೆಯನ್ನು ಒಳಗೊಂಡಿದೆ. ನಮ್ಮಲ್ಲಿ ತಂತ್ರಜ್ಞಾನ ವಿಸ್ತರಣೆ ಇತ್ಯಾದಿಗಳಲ್ಲಿ ನಾಸ್ಕಾಂ ಮಹತ್ತರ ಪಾತ್ರ ವಹಿಸುತ್ತಿದೆ. ಹೂಡಿಕೆಯನ್ನು ಆಕರ್ಷಿಸಲು ಜನರ ನಡುವೆ ಪರಸ್ಪರ ಸಂಪರ್ಕ ಮುಖ್ಯವಾಗುತ್ತದೆ.
ಜೊತೆಗೆ ತಮ್ಮ ದೇಶಕ್ಕೆ ಬಂದು ಹೂಡಿಕೆ ಮಾಡಲಿರುವ ಇಲ್ಲಿನ ಕಂಪನಿಗಳಿಗೆ ತೆರಿಗೆ ವಿನಾಯಿತಿಯಂತಹ ಆಕರ್ಷಕ ಸೌಲಭ್ಯಗಳನ್ನು ಕೊಡುವುದು ಮುಖ್ಯ ಎಂದು ಸಚಿವರು ಸಲಹೆ ನೀಡಿದರು. ಕರ್ನಾಟಕವು ಒಮ್ಮುಖ ನಿಲುವಿನಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ.
ನಮ್ಮ ಚಿಂತನೆಗಳು ಜಾಗತಿಕ ಸ್ವರೂಪದಲ್ಲಿದ್ದು, ಸಮಾಜದ ಪ್ರತಿಯೊಬ್ಬರಿಗೂ ಉದ್ದಿಮೆ ಮತ್ತು ತಂತ್ರಜ್ಞಾನಗಳ ಲಾಭ ಸಿಗಬೇಕೆನ್ನುವುದೇ ಸರ್ಕಾರದ ಗುರಿಯಾಗಿದೆ. ಇದಕ್ಕೆ ತಕ್ಕಂತೆ ಭಾರತವು ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ಹೇಳುವ 'ವಸುಧೈವ ಕುಟುಂಬಕಂ' ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದರು.
ಇದನ್ನೂ ಓದಿ: ನಾವು ಯಾರ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ: ಹೆಚ್.ಡಿ.ಕುಮಾರಸ್ವಾಮಿ