ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಕರೆದಿದ್ದ ಟೆಂಡರ್ನಲ್ಲಿ ತಮ್ಮ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪವನ್ನು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಲ್ಲಗಳೆದಿದ್ದಾರೆ. ಇದೊಂದು ಆಧಾರರಹಿತ ಆಪಾದನೆ, ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ ಎಂದು ಪ್ರತಿಕ್ರಿಯಿಸಿದರು.
ಸಮಾಜದಲ್ಲಿ ಜನರ ಗಮನ ಸೆಳೆಯಲು ಯಾವುದೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಸೂಚಿಯನ್ನು ಹೊಂದಿರದ ಆಮ್ ಆದ್ಮಿ ಪಕ್ಷವು ಇಲ್ಲದ ಭ್ರಷ್ಟಾಚಾರದ ವಾಸನೆ ಹಬ್ಬಿಸುವ ಮೂಲಕ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ಹೊರಟಿದೆ. ಇಂತಹ ಆಪಾದನೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮೂಲಕ ನಡೆದ ಟೆಂಡರ್ನಲ್ಲಿ ಅಕ್ರಮವಾಗಿದೆ ಎಂದು ಎಎಪಿ ಮುಖಂಡ ಮೋಹನ್ ದಾಸರಿ ಆರೋಪಿಸಿದ್ದಾರೆ. ವಾಸ್ತವ ಏನೆಂದರೆ, ಮೊದಲು 22 ಕೋಟಿ ರೂ.ಗೆ ಕರೆಯಲಾಗಿದ್ದ ಟೆಂಡರ್ ರದ್ದುಗೊಳಿಸಿ ಎರಡನೇ ಬಾರಿ 21-01-22ರಂದು ತೆರೆದ ಬಿಡ್ನಲ್ಲಿ 15.99 ಕೋಟಿ ರೂ.ಗೆ ಅಂತಿಮಗೊಳಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 5.27 ಕೋಟಿ ರೂಪಾಯಿ ಉಳಿತಾಯವಾಗಿದೆ. ಆದರೆ ಎಎಪಿ ಮುಖಂಡರ ಗಮನ ಸೆಳೆಯುವ ಭರದಲ್ಲಿ ಕೂಲಂಕಷವಾಗಿ ಪರಿಶೀಲಿಸದೇ ಬೇಕಾಬಿಟ್ಟಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಎಸ್ಸಿ- ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆಯಲ್ಲಿ 22ಕೋಟಿ ರೂ. ಭ್ರಷ್ಟಾಚಾರ: ಆಪ್ ಆರೋಪ
ಟೆಂಡರ್ ಅನುಮೋದನೆ ಪಡೆದಿರುವ ಕಂಪನಿಗೆ ಆಟೋಮೊಬೈಲ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್, ಮೆಕಾನಿಕ್, ಫಿಟ್ಟರ್ ಮತ್ತು ಮೆಕ್ಯಾನಿಕಲ್ ವಲಯಗಳಿಗೆ ರೂ. 15.99 ಕೋಟಿ ಮೊತ್ತದಲ್ಲಿ ಟೂಲ್ ಕಿಟ್ಗಳನ್ನು ಸರಬರಾಜು ಮಾಡಲು ಆದೇಶಿಸಲಾಗಿದೆ. ಈ ಪೈಕಿ ಮೂರು ವಲಯಗಳಿಗೆ ಫ್ರೀ ಡೆಸ್ ಪ್ಯಾಚ್ ಪರಿಶೀಲನೆಗೆ ಜುಲೈ 14ರಂದು ದಿನಾಂಕ ನಿಗದಿಗೊಳಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಸಂಬಂಧ ಈವರೆಗೆ ಯಾವುದೇ ಹಣ ಪಾವತಿಯಾಗಿಲ್ಲ. ಪ್ರಿನ್ಸಿಪಾಲರಿಂದ ದೃಢೀಕೃತ ಬಿಲ್ ಮತ್ತು ಎಂಸಿಇ-07 ಅನ್ನು ಪಡೆದ ನಂತರವಷ್ಟೇ ಹಣ ಪಾವತಿ ನಡೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.