ಬೆಂಗಳೂರು: ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಯಾವ ಸರ್ಕಾರ ಈ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ ತಂದಿದೆ. ಇದು ಒಂದು ರೀತಿಯ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಕಾಣಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಈ ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ತರದ ಸಂಸ್ಕೃತಿಯಿಂದ ಬಂದವರಲ್ಲ. ಅವರ ತಂದೆ ಸಿಎಂ ಆಗಿ ಕೆಲಸ ಮಾಡಿದವರು. ಫೋನ್ ಟ್ಯಾಪಿಂಗ್ ಸಂಸ್ಕೃತಿ ಕಾಂಗ್ರೆಸ್ನವರದ್ದು. ಅವರಿಗೆ ಇದರಲ್ಲಿ ಅನುಭವ ಇದೆ. ಫೋನ್ ಟ್ಯಾಪಿಂಗ್ ಮಾಡುವ ಅಗತ್ಯ ನಮಗಿಲ್ಲ. ಅವರ ಪಕ್ಷದಲ್ಲಿ ಅಭದ್ರತೆ ಇದೆ. ಹೀಗಾಗಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ- ನನ್ನ ಫೋನ್ ಟ್ಯಾಪಿಂಗ್ ಮಾಡಲಾಗ್ತಿದೆ: ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಆರೋಪ
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬೇರೆ ಬೇರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ ದಕ್ಷ ಅಧಿಕಾರಿ. ಯಾರು ಅಪರಾಧ ಮಾಡಿದ್ದಾರೋ ಅವರನ್ನು ಹೆಡೆಮುಡಿ ಕಟ್ಟಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದವರು ಮತ್ತು ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿದವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಆಯುಕ್ತರು ಬಿಜೆಪಿ ಏಜೆಂಟ್ ಅಂತ ಹೇಳಿದರೆ ಹೇಗೇ? ಹಾಗಾದರೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದವರು ಧರ್ಮಾತ್ಮರಾ? ಎಂದು ಆಶೋಕ್ ಪ್ರಶ್ನಿಸಿದರು.
ಕಾಂಗ್ರೆಸ್ನವರು ಈ ಸಂಸ್ಕೃತಿ ಬಿಟ್ಟುಬಿಡಿ. ಈ ದಬ್ಬಾಳಿಕೆ, ಆರೋಪ ನಿಮಗೆ ಬಂದಿರುವ ಬಳುವಳಿ. ಯಾರನ್ನೋ ರಕ್ಷಣೆ ಮಾಡುವುದಕ್ಕೆ ಪೊಲೀಸ್ ಆಯುಕ್ತರಿಗೆ ವಾರ್ನಿಂಗ್ ಕೊಡುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟರು.