ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ದೊರೆಯದಿರುವುದಕ್ಕೆ ಅಸಮಾಧಾನಗೊಂಡಿರುವ ಕಂದಾಯ ಸಚಿವ ಆರ್ ಅಶೋಕ್ ಬೆಂಗಳೂರಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಭಾಗವಹಿಸುವ ಸರ್ಕಾರಿ ಮತ್ತು ಬಿಬಿಎಂಪಿಯ ಕಾರ್ಯಕ್ರಮಗಳಲ್ಲಿ ಸಚಿವ ಅಶೋಕ್ ಅವರು ಸುಳಿಯುತ್ತಲೇ ಇಲ್ಲ.
ಇದಕ್ಕೆ ತಾಜಾ ಉದಾಹರಣೆಯೆಂದರೆ ಬುಧವಾರ ನಡೆದ ಪ್ರತಿಷ್ಠಿತ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಸಚಿವರಾದ ಅಶೋಕ್ ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ವೇದಿಕೆ ಮೇಲೇರುವುದು ಇರಲಿ, ಕಾರ್ಯಕ್ರಮದ ಹತ್ತಿರಕ್ಕೂ ಬರಲಿಲ್ಲ.
ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ, ಒಂದು ಕಾಲದಲ್ಲಿ ಬೆಂಗಳೂರಿನ ಸಾಮ್ರಾಟ್ ಎಂದೇ ಕರೆಸಿಕೊಳ್ಳುತ್ತಿದ್ದ ಅಶೋಕ್ ಅವರ, ಅನುಪಸ್ಥಿತಿ ಈಗ ಎಲ್ಲರ ಗಮನವನ್ನು ಸೆಳೆಯತೊಡಗಿದೆ.
ಅಶೋಕ್ ಅವರ, ಈ ನಡೆ ಗಮನಿಸಿದರೆ, ಅಸಮಾಧಾನದ ಜೊತೆಗೆ ಬೆಂಗಳೂರಿನಿಂದಲೇ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಈಗ ಪಕ್ಷದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ. ಉಪಮುಖ್ಯಮಂತ್ರಿ ಸ್ಥಾನವನ್ನು ತಮಗೇ ನೀಡುವಂತೆ ಅಶೋಕ್, ಪಟ್ಟು ಹಿಡಿದಿದ್ದರು. ತಮಗಿಂತಲೂ ಕಿರಿಯರಾದ ಅಶ್ವಥ್ ನಾರಾಯಣ್ಗೆ ಆ ಸ್ಥಾನ ನೀಡಿದ್ದಕ್ಕೆ ಅತೃಪ್ತಿಯನ್ನು ಅವರು , ಪಕ್ಷದ ವಲಯದಲ್ಲಿ ಆಂತರಿಕವಾಗಿ ವ್ಯಕ್ತಪಡಿಸಿದ್ದರು.
ಡಿಸಿಎಂ ಕೈತಪ್ಪಿದರೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನಾದರೂ ನೀಡುವಂತೆ ಅಶೋಕ್ ಕೇಳಿಕೊಂಡಿದ್ದರು. ಅದೂ ಸಹ ದೊರೆಯದಿದ್ದಕ್ಕೆ ಅಶೋಕ್ ಅಸಮಾಧಾನ ಮತ್ತಷ್ಟು ತೀವ್ರಗೊಂಡು, ಅದನ್ನು ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಅಂತರ ಕಾಯ್ದುಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಅಶೋಕ್ ಅವರೇ ಬೆಂಗಳೂರು ನಗರದ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮ ಅಥವಾ ಪ್ರತಿಭಟನೆಗಳು ನಡೆದರೆ ಅದಕ್ಕೆ ಅಶೋಕ್ ಅವರೇ ಸಾರಥ್ಯ ವಹಿಸುತ್ತಿದ್ದರು. ಅಷ್ಟೇ ಏಕೆ ಬಿಬಿಎಂಪಿ ಚುನಾವಣೆಯಲ್ಲೂ ಸಹ ಎಲ್ಲ ಕಾರ್ಪೋರೇಟರ್ಸ್ಗೆ ಟಿಕೇಟ್ ಅಂತಿಮಗೊಳಿಸುವ ಜವಾಬ್ದಾರಿಯನ್ನೂ ಸಹ ನಿಭಾಯಿಸಿದ್ದರು.
ಈ ಹಿನ್ನಲೆಯಲ್ಲಿ ಅಶೋಕ್ಗೆ ಬೆಂಗಳೂರು ಸಾಮ್ರಾಟ್ ಎಂದೇ ಬಿಂಬಿಸಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಶೋಕ್ ಅವರು ಬೆಂಗಳೂರು ಜವಾಬ್ದಾರಿಯಿಂದ ವಿಮುಖರಾಗಿದ್ದು ಎಲ್ಲ ಹಂತಗಳಲ್ಲೂ ಅಂತರವನ್ನು ಅಶೋಕ್ ಕಾಯ್ದುಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಗಳನ್ನು ಅವಲೋಕಿಸಿದರೆ ಬೆಂಗಳೂರು ಮೇಲಿನ ಹಿಡಿತ ಅಶೋಕ್ ಕೈ ತಪ್ಪುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.