ಬೆಂಗಳೂರು: ಕನ್ನಡದ ಮೇರು ಕವಿಯನ್ನು ನಾವು ಕಳೆದುಕೊಂಡಿದ್ದೇವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನಿತ್ಯೋತ್ಸವ ಕವಿಯ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪದ್ಮನಾಭ ನಗರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಂತ್ರ ಮಾತನಾಡಿದ ಸಚಿವ ಆರ್. ಅಶೋಕ್ ನಿಸಾರ್ ಅಹಮ್ಮದ್ ಅವರು ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆ ಸಲ್ಲಿಸಿದ್ದಾರೆ. ಅನೇಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರನ್ನು ಕಳೆದುಕೊಂಡಿರುವುದು ಕನ್ನಡ ಭಾಷೆಗೆ ದೊಡ್ಡ ಆಘಾತವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ರು.
ನಿಸಾರ್ ಅಹಮ್ಮದ್ ಅವರ ಹೆಸರಲ್ಲಿ ಟ್ರಸ್ಟ್ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಬಳಿ 2.20 ಗುಂಟೆ ಜಮೀನು ಮಂಜೂರು ಮಾಡಿದ್ದೆವು. ಮುಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಘೋಷಣೆ ಆಗಬೇಕಿತ್ತು. ಆದರೆ ಈಗ ನಿಸಾರ್ ಅಹಮ್ಮದ್ ನಮ್ಮನ್ನಗಲಿದ್ದಾರೆ.ಅವರ ಹೆಸರಲ್ಲಿ ಟ್ರಸ್ಟ್ ನಿರ್ಮಾಣ ಮಾಡಿ ಅವರ ಸಾಹಿತ್ಯ ಮೆರವಣಿಗೆ ಮುಂದುವರೆಯುವಂತೆ ಮಾಡುತ್ತೇವೆ. ಇನ್ನು ನಿಸಾರ್ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಅವರ ಕುಟುಂಬದವರಿಗೆ ನೀಡಲಿ ಎಂದು ಸಚಿವರು ಹೇಳಿದ್ರು.