ಮಹದೇವಪುರ: ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ಕ್ಷೇತ್ರದ 20 ಗ್ರಾಮಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಬಿಎಂಪಿಗೆ ಸೇರ್ಪಡೆಗೊಳಿಸಲು ಪಾಲಿಕೆ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ 198 ವಾರ್ಡ್ಗಳಿಂದ 243 ವಾರ್ಡ್ಗಳನ್ನು ರಚಿಸಿ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ ಕಾರ್ಯ ಪ್ರಾರಂಭವಾಗಿದೆ. ಬಿಬಿಎಂಪಿಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವುದರಿಂದ ಅಗತ್ಯ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಉನ್ನತೀಕರಿಸಲು ಸಹಕಾರಿಯಾಗಲಿದೆ.
ಮಹದೇವಪುರ ಕ್ಷೇತ್ರದ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಗ್ರಾಮಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡುವಂತೆ ಸಚಿವ ಅರವಿಂದ ಲಿಂಬಾವಳಿ ಅವರು ವಾರ್ಡ್ ವಿಂಗಡಣಾ ಸಮಿತಿಗೆ ಪ್ರಸ್ತಾವನೆ ಸಲಿಸಿದ್ದು, ಅದರಂತೆ ಪಾಲಿಕೆಯು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪುನರ್ ವಿಂಗಡಣಾ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಪಾಲಿಕೆಯು ಸರ್ಕಾರಕ್ಕೆ ವರದಿ ನೀಡಿದೆ.
ಬಿಬಿಎಂಪಿ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಮಳನ್ನು ಪಾಲಿಕೆಗೆ ಸೇರ್ಪಡೆ ಮಾಡಿಕೊಂಡು ವಾರ್ಡ್ಗಳ ಪುನರ್ ವಿಂಗಡಣೆಗೆ ಬಿಬಿಎಂಪಿ ಆಯುಕ್ತ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಸಮಿತಿ ರಚಿಸಿ, 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಸಮಿತಿಯು ಪ್ರಸ್ತಾವನೆಯ ವರದಿ ಸಲ್ಲಿಸಿದೆ.
ಬೆಂಗಳೂರಿಗೆ ಹೊಂದಿಕೊಂಡಿದ್ದರೂ ಅನುದಾನ ಕೊರತೆಯಿಂದ ಅಭಿವೃದ್ಧಿ ಮರೀಚಿಕೆಯಾಗಿತ್ತು. ಪಾಲಿಕೆ ಸೇರ್ಪಡೆಗೊಂಡರೆ ಅಭಿವೃದ್ಧಿಗೆ ಹೆಚ್ಚು ವೇಗ ದೊರೆಯಲಿದೆ. ಪಾಲಿಕೆಗೆ ಹೊಂದಿಕೊಂಡಿರುವ ಗ್ರಾಮದ ಪ್ರದೇಶಗಳು ಸೇರ್ಪಡೆಗೊಂಡರೆ ಮೂಲ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ಸಿಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.