ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಕುರಿತು ಆಯಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಂದ ಒಂದು ತಿಂಗಳಿನಲ್ಲಿ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿರುವ ವಿದೇಶದ ಪ್ರಜೆಗಳ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ವಿದೇಶಿಗರ ಪುಂಡಾಟಕ್ಕೆ ಬ್ರೇಕ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ಕೊಟ್ಟರು.
ಅಕ್ರಮ ದಂಧೆ: ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ: ವಿಧಾನ ಪರಿಷತ್ತಿನಲ್ಲಿ ನಿಯಮ 72 ರ ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಮೇಲೆ ಮಾತನಾಡಿದ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಬೆಂಗಳೂರಿಗರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಬೆಂಗಳೂರು ಕಡೆ ವಿದೇಶಿಗರ ಒಲವು ಹೆಚ್ಚಾಗಿದೆ. ಕಳೆದ ಹತ್ತು ವರ್ಷದಿಂದ ವಿದೇಶಿ ಪ್ರವಾಸಿಗರ ಹಾವಳಿ ಹೆಚ್ಚಾಗಿದೆ.7-8 ಸಾವಿರ ಜನ ಆಫ್ರಿಕಾ, ಬಾಂಗ್ಲಾದಿಂದ ಜನ ಅಕ್ರಮವಾಗಿ ಬಂದು ನೆಲೆಸಿದ್ದಾರೆ. ಕೊತ್ತನೂರು, ಬಾಗಲೂರ, ರಾಮಮೂರ್ತಿನಗರ, ಬಾಣಸವಾಡಿ, ಕೆ.ಆರ್.ಪುರ, ತಲಘಟ್ಟಪುರ, ಬನಶಂಕರಿ, ಬಾಗಲಕುಂಟೆ, ಆರ್.ಆರ್.ನಗರ ಹೀಗೆ ಬೆಂಗಳೂರು ಸುತ್ತಮುತ್ತು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣಕ್ಕಾಗಿ ಬಂದು ನಕಲಿ ನೋಟು, ಡಾಲರ್ ದಂಧೆಯಲ್ಲಿ ಭಾಗಿಯಾಗುತ್ತಾರೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಇರಾನಿ ಪ್ರಜೆಗಳು ಅಕ್ರಮ ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆ ಜಾಲವೂ ಇದೆ. ಕಳೆದ 10 ವರ್ಷದಲ್ಲಿ ಇದರ ನಿಯಂತ್ರಣಕ್ಕೆ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಜೆಸಿ ನಗರ ಠಾಣೆಯನ್ನು ಇರಾನಿಗಳು ದಾಳಿ ನಡೆಸುತ್ತಿದ್ದಾರೆ. ಶೇ.70 ರಷ್ಟು ವಿದೇಶಿ ಪ್ರಜೆಗಳು ಕ್ರೈಂ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಆಫ್ರಿಕನ್, ಕಾಂಬೋ, ಬಾಂಗ್ಲಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಬಳಿಕ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ವೀಸಾ ಅವಧಿ ಮುಗಿದವರು ಮಾತ್ರ ಅಲ್ಲ. ಅವದಿ ಇದ್ದವರೂ ಕ್ರೈಂನಲ್ಲಿ ಭಾಗಿಯಾಗುತ್ತಿದ್ದಾರೆ. ಡ್ರಗ್ಸ್ ಪೆಡ್ಲರ್ಗಳಾಗುತ್ತಿದ್ದಾರೆ. ಹಾಗಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು. ಅವರೆಲ್ಲ ನಮ್ಮ ಜನರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಒತ್ತಾಯಿಸಿದರು.
ನಂತರ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರಿನಂತಹ ಕಡೆಗೂ ಅಕ್ರಮ ವಲಸಿಗರು ವಲಸೆ ಹೋಗಿದ್ದಾರೆ. ಕೇವಲ ಬೆಂಗಳೂರು ಕೇಂದ್ರವಾಗಿಸದೆ ಎಲ್ಲಾ ಕಡೆ ಗಮನ ಹರಿಸಬೇಕು ಎಂದರು.
ಸಮೀಕ್ಷೆ ನಡೆಸುವಂತೆ ಸೂಚನೆ: ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕಳೆದ ಮೂರು ವರ್ಷದಲ್ಲಿ 296 ಪ್ರಕರಣ ದಾಖಲಿಸಿದ್ದು,441 ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಅವರ ವಿರುದ್ಧ ಇರುವ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ನಿರ್ಗಮನ ಪರವಾನಗಿ ಪಡೆಯುವವರೆಗೂ ಡಿಟೆಂಷನ್ ಸೆಂಟರ್ನಲ್ಲಿ ಇರಿಸಿಕೊಂಡು ನಂತರ ಗಡಿಪಾರು ನಿಯಮ ಪಾಲನೆ ಮಾಡಲಾಗುತ್ತಿದೆ. 672 ವಿದೇಶಿಗರು ಅಕ್ರಮ ವಾಸ ಮಾಡುತ್ತಿದ್ದಾರೆ. ನಮ್ಮ ದೇಶ ಧರ್ಮದ ಛತ್ರ ಆಗಬಾರದು, ಯಾರು ಹೇಗೆ ಬೇಕಾದರು ಬರಬಹುದು, ಬದುಕಬಹುದು, ಏನು ಬೇಕಾದರೂ ಮಾಡಬಹುದು ಎನ್ನುವ ಕಲ್ಪನೆ ಹೊಂದಿದ್ದಾರೆ. ನಾನು ಸಚಿವನಾದ ನಂತರ ವಿಶೇಷ ಗಮನ ಹರಿಸಿ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿಯೂ ಈ ಬಗ್ಗೆ ಸಮೀಕ್ಷೆ ಮಾಡಿಸಬೇಕು. ಇದರಲ್ಲಿ ರಾಜಕೀಯ ಮಾಡಲ್ಲ. ದೇಶದ ಭದ್ರತೆ ಪ್ರಶ್ನೆ, ಶಾಂತಿಗೆ ಭಂಗ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಡ್ರಗ್ಸ್ ವಾರ್ ನಡೆಯುತ್ತಿದೆ. ನೈಜೀರಿಯನ್ ಪ್ರಜೆಗಳ ಪುಂಡಾಟ ನಡೆಯುತ್ತಿದೆ. ನಮ್ಮ ದೇಶದ ಯುವ ಸಂಪತ್ತನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಈ ಜಾಲ ಡ್ರಗ್ಸ್ ಮೂಲಕ ನಡೆಸುತ್ತಿದೆ ಎಂದರು.
ಡ್ರಗ್ಸ್ ನಿಯಂತ್ರಣಕ್ಕೆ ಗಡಿ ರಾಜ್ಯಗಳ ಸಹಕಾರ ಅತ್ಯಗತ್ಯ: ಡ್ರಗ್ ಮೇಲೆ ನಮ್ಮ ಸರ್ಕಾರ ವಾರ್ ನಡೆಸಿದೆ. ವಿದೇಶಿಯರು ಸೇರಿ 8 ಸಾವಿರ ಜನರ ಮೇಲೆ ಕೇಸ್ ಹಾಕಿದ್ದೇವೆ. ನಿಯಂತ್ರಣ ಮಾಡುವ ಎಲ್ಲಾ ಕೆಲಸ ಮಾಡಲಾಗುತ್ತದೆ. ಡಿಟೆಂಷನ್ ಕೇಂದ್ರದ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. ಹೊಸದಾಗಿ 3 ರಿಂದ 4 ಕೇಂದ್ರ ಸ್ಥಾಪಿಸಲಾಗುತ್ತದೆ.ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ಬಾಂಗ್ಲಾ ಪ್ರಜೆಗಳಿಂದ ಬರುವಾಗಲೇ ಗಡಿಯಲ್ಲಿ ಗುರುತಿನ ಚೀಟಿ ತರುತ್ತಿದ್ದಾರೆ. ವಿದೇಶದಿಂದ ಬಂದು ಇಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಪ್ರಜೆ ಎನ್ನುತ್ತಿದ್ದಾರೆ ನಂತರ ಇಲ್ಲಿನ ಪ್ರಜೆಗಳಾಗುತ್ತಿದ್ದಾರೆ. ಇದೊಂದು ಜಾಲವಾಗಿದೆ.ಇದರ ನಿಯಂತ್ರಣಕ್ಕಾಗಿ ದೇಶದ ಗಡಿ ಭಾಗದ ರಾಜ್ಯಗಳ ಸಹಕಾರವೂ ಬೇಕು. ಈ ಕುರಿತು ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ. ಪಶ್ಚಿಮ ಬಂಗಾಳವೂ ನಮಗೆ ಸಹಕಾರ ಕೊಡಬೇಕು.ತಿಂಗಳ ಒಳಗೆ ಸರ್ವೇ ನಡೆಸಿ ವರದಿ ನೀಡಬೇಕು ಎಂದು ಎಲ್ಲಾ ಠಾಣೆಗಳಿಗೆ ತಿಳಿಸುತ್ತೇನೆ. ವರದಿ ಬರುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.