ಬೆಂಗಳೂರು: ಹಿಂದೂ ಪದದ ಕುರಿತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಂದೂಗಳನ್ನು ತೆಗಳಿದರೆ ಅಲ್ಪಸಂಖ್ಯಾತರ ವೋಟ್ ಬರುತ್ತೆ ಅನ್ನೋದು ಅವರು ಲೆಕ್ಕಚಾರ ಎಂದು ದೂರಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಈಗಾಗಲೇ ಕಾಂಗ್ರೆಸ್ನ ಕೆಲ ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ. ಇವರು ಅತ್ತಂಗೆ ಮಾಡೋದು, ಮತ್ತೊಬ್ಬರು ಸಮಾಧಾನ ಮಾಡೋದು. ಇದೊಂದು ತಂತ್ರ ಅಷ್ಟೇ. ಜಾತಿ ಮತ್ತು ಧರ್ಮವನ್ನು ಒಡೆಯೋದೇ ಅವರ ಕೆಲಸ. ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಬದುಕಬಾರದು ಅಂತಾ ಅವರು ಹೀಗೆ ಇರೋದು. ಇದೆಲ್ಲವನ್ನು ಕೇವಲ ವೋಟಿಗಾಗಿ ಮಾಡುತ್ತಿದ್ಧಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ನಾನು ಏನು ಹೇಳೋದಿಲ್ಲ. ಅದರ ಪಾಡಿಗೆ ಅದು ಆಗುತ್ತದೆ ಎಂದರು.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇವೆ. ರಾಜ್ಯದಲ್ಲೂ ಇದನ್ನು ಅನುಷ್ಠಾನ ಮಾಡುತ್ತೇವೆ ಎಂದ ಹೇಳಿದರು. ಇದೇ ವೇಳೆ ಮುರುಘಾ ಶರಣರ ಪ್ರಕರಣದಲ್ಲಿ ಒಂದು ಚಾರ್ಜ್ಶೀಟ್ ಹಾಕಿದೆ. ತನಿಖೆಯಿಂದ ಏನೇನು ಇದೆಯೋ ಅದನ್ನು ಚಾರ್ಜ್ ಶೀಟ್ ಮಾಡಿದ್ದಾರೆ. ತನಿಖೆಗೆ ಯಾರ ವಿರೋಧವೂ ಇಲ್ಲ. ತನಿಖೆಯಲ್ಲಿ ಬಂದಂತೆ ಎಲ್ಲವೂ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನನ್ನ ಹೇಳಿಕೆ ತಪ್ಪು ಅಂತಾ ಸಾಬೀತಾದ್ರೆ ರಾಜಕೀಯ ನಿವೃತ್ತಿಗೆ ಸಿದ್ಧ: ಬಿಜೆಪಿಗೆ ಸತೀಶ್ ಜಾರಕಿಹೊಳಿ ಸವಾಲು