ಬೆಂಗಳೂರು: ರಾಜ್ಯದಲ್ಲಿ ವಿಫುಲ ಖನಿಜ ನಿಕ್ಷೇಪಗಳಿದ್ದು, ಇವುಗಳ ಶೋಧನೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಈ ಶೋಧನೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಂದ್ರ ಗಣಿ ಮಂತ್ರಾಲಯ ಸರ್ಕಾರ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್‌ನ ಸಹಕಾರ ಅಗತ್ಯವಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮನವಿ ಮಾಡಿದರು.
ಶುಕ್ರವಾರ ಹೈದರಾಬಾದ್‌ನಲ್ಲಿ ಪ್ರಾರಂಭವಾದ “ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶ” ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಇದುವರೆಗೂ ಯಾವುದೇ ಸರ್ಕಾರಗಳು ಗಣಿ ಕ್ಷೇತ್ರದಲ್ಲಿ ಇಂತಹ ಪಾರದರ್ಶಕ ಹಾಗೂ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಲು ಮುಂದಾಗಿರಲಿಲ್ಲ. ಈ ಸುಧಾರಣೆಗಳು ರಾಜ್ಯ ಸರ್ಕಾರಗಳು ಹೆಚ್ಚು ಆದಾಯವನ್ನು ಪಡೆದುಕೊಳ್ಳಲು ಸಹಾಯ ಮಾಡಿವೆ. ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಕ್ರಮಗಳು ರಾಜ್ಯಗಳ ಗಣಿ ಕ್ಷೇತ್ರದ ಅಭಿವೃದ್ದಿಗೂ ಸಹಕಾರ ಮಾಡಿವೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆಗೆ ವಿಫುಲ ಅವಕಾಶಗಳಿವೆ. ಲೈಮ್‌ಸ್ಟೋನ್ ಗಣಿಗಾರಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಹಾಗೂ ಕಬ್ಬಿಣದ ಅದಿರಿನ ಗಣಿಗಾರಿಕೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. 2021-22 ರಲ್ಲಿ ರಾಜ್ಯ ಸರ್ಕಾರ 6,308 ಕೋಟಿ ರೂಪಾಯಿಗಳ ಆದಾಯ ಸಂಗ್ರಹಿಸಿದೆ. ಪ್ರಸ್ತುತ ಸಾಲಿನಲ್ಲಿ ಜುಲೈವರೆಗೂ 1,425 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಲಾಗಿದ್ದು, ಈ ಬಾರಿ 6,500 ಕೋಟಿ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿದ್ದೇವೆ. 2015ರಿಂದ ಗಣಿ ಕ್ಷೇತ್ರದಲ್ಲಿ ಆಗಿರುವ ಸುಧಾರಣೆಯ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲೂ ಬಹಳಷ್ಟು ಅಭಿವೃದ್ದಿಯಾಗಿದೆ.
ರಾಜ್ಯದಲ್ಲಿ ಇನ್ನೂ ಹೆಚ್ಚಿನ ಖನಿಜ ನಿಕ್ಷೇಪಗಳಿದ್ದು, ಅವುಗಳ ಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಈಗಾಗಲೇ 113 ಭೂವಿಜ್ಞಾನಿಗಳನ್ನು ನೇಮಕ ಮಾಡಿಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕೇಂದ್ರ ಗಣಿ ಮಂತ್ರಾಲಯ ಸರ್ಕಾರ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್‌ನ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಕಳೆದ ವರ್ಷ ರಾಷ್ಟ್ರೀಯ ಖನಿಜ ವಿಕಾಸ ಪುರಸ್ಕಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಗಣಿ ಇಲಾಖೆಯಲ್ಲಿ ನೂತನ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೊದಲ 2ನೇ ಸ್ಥಾನಕ್ಕೆ ಅಭಿವೃದ್ದಿ ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದರು.
ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನದ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಅಲ್ಲದೇ, ಕೇಂದ್ರ ಗಣಿ ನೀತಿಯ ಸುಧಾರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಗಣಿ ಬ್ಲಾಕ್‌ಗಳನ್ನು ಹರಾಜು ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವ ಬಗ್ಗೆಯೂ ಶ್ಲಾಘನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಗಣಿ ಸಚಿವರಾದ ಪ್ರಹ್ಲಾದ್ ಜೋಷಿ, ದೇಶದ ಹಲವು ರಾಜ್ಯಗಳ ಗಣಿ ಇಲಾಖೆಯ ಸಚಿವರು, ಗಣಿ ಮಂತ್ರಾಲಯದ ಹಿರಿಯ ಅಧಿಕಾರಿಗಳು ರಾಜ್ಯದ ಗಣಿ ಇಲಾಖೆ ನಿರ್ದೇಶಕ ಡಿ ಎಸ್ ರಮೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಕನಕಗಿರಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ಪತ್ತೆ