ಬೆಂಗಳೂರು: ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳನ್ನು ಮುಖ್ಯವಾಹಿನಿಗೆ ತರಲು ಜಾಗತಿಕ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರದಿಂದ ಸಿರಿಧ್ಯಾನಗಳನ್ನು ರೈತರ ಪ್ರತಿಕೃತಿಯ ಬುಟ್ಟಿಗೆ ಸುರಿಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಳಿಗೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ಸಿರಿಧಾನ್ಯ ಆಹಾರ ಪ್ರೋತ್ಸಾಹಿಸಲು ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು. ಅದೇ ರೀತಿ ಪಡಿತರ ಅಂಗಡಿಗಳಲ್ಲಿ ಸಿರಿಧಾನ್ಯಗಳನ್ನು ವಿತರಿಸಲಾಗುವುದು. ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಢ ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ ಊಟದಲ್ಲಿ ಸಿರಿಧಾನ್ಯ ಬಳಸುವ ಸಂಬಂಧ ಸದ್ಯದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಸಿರಿಧಾನ್ಯ ಬೆಳೆ ಕೇಂದ್ರ ಸ್ಥಾಪನೆ: ಉತ್ತಮ ಗುಣಮಟ್ಟದ ಸಿರಿಧಾನ್ಯ ಬೀಜ ಉತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಅಗತ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ ಎಂದು ಸಿಎಂ ಹೇಳಿದರು.
ಎಲ್ಲಿ ಮಳೆ ಕಡಿಮೆ ಬೀಳುತ್ತದೆಯೋ, ಭೂಮಿಯ ಫಲವತ್ತತೆ ಕಡಿಮೆ ಇರುವ ಪ್ರದೇಶಗಳಲ್ಲೂ ಬೆಳೆಯಬಹುದಾದ ಸಿರಿಧಾನ್ಯ ಆರೋಗ್ಯಕ್ಕೆ ಬಹಳ ಸಹಕಾರಿ. ಇದಕ್ಕಾಗಿ ರಾಜ್ಯ ಸರ್ಕಾರ ನಿರಂತರವಾಗಿ ಸಿರಿಧಾನ್ಯ ಮೇಳವನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಸಾರಜನಕ, ಲವಣ, ವಿಟಮಿನ್ ಮತ್ತು ನಾರಿನ ಅಂಶಗಳು ಸಿರಿಧಾನ್ಯಗಳಲ್ಲಿ ಹೆಚ್ಚಾಗಿವೆ. ಇವತ್ತಿನ ಹಲವು ಕಾಯಿಲೆಗಳಿಗೆ ರಸಾಯನಿಕ ಮಿಶ್ರಿತ ಆಹಾರ ಪದಾರ್ಥ ಸೇವನೆ ಕೂಡ ಒಂದು ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದಕ್ಕೆ ಸಾವಯವ ಸಿರಿಧಾನ್ಯ ಸೇವನೆ ಉತ್ತಮ ಪರಿಹಾರ ಆಗುತ್ತಿದೆ ಎಂದರು.
ಪರಿಷ್ಕೃತ ಸಾವಯವ ಕೃಷಿ ನೀತಿ ಜಾರಿ: 2004ರಲ್ಲಿ ಸಾವಯವ ಕೃಷಿ ನೀತಿ, 2014ರಲ್ಲಿ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸಾವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ನಮ್ಮ ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಇದರಿಂದ ಜನರ ಆರೋಗ್ಯಕ್ಕೂ ಬಹಳ ಸಹಕಾರಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಹೆಚ್ಚು ಜನಪ್ರಿಯ ಆಗುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾದ್ದರಿಂದ ಆಹಾರ ಸ್ವಾವಲಂಬನೆ ಸಾಧಿಸಲು ಹಸಿರು ಕ್ರಾಂತಿ ನಡೆಸಲಾಯಿತು. ಈ ಮೂಲಕ ಪ್ರತಿಯೊಬ್ಬರಿಗೂ ಆಹಾರ ಒದಗಿಸಲು ನೆರವಾಯಿತು.
ಕೃಷಿ ಪ್ರಧಾನ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಕೃಷಿ ಮೇಲೆ ಹೆಚ್ಚು ಅವಲಂಬನೆ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿ ಮಾಡಲಾಗಿತ್ತು. ಈ ವೇಳೆ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗಿತ್ತು. ಇದರಿಂದ ಸಿರಿಧಾನ್ಯಗಳ ಬೆಳೆ ಕುಂಠಿತವಾಗಿತ್ತು. ಮತ್ತೆ ಸಿರಿಧಾನ್ಯಗಳು ಮುನ್ನೆಲೆಗೆ ಬಂದಿರುವುದು ಸಂತಸವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
20 ಲಕ್ಷ ಟನ್ ಸಿರಿಧಾನ್ಯ ಬೆಳೆ: ರಾಜ್ಯದಲ್ಲಿ 8 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ, 5 ಲಕ್ಷ ಹೆಕ್ಟೇರ್‌ನಲ್ಲಿ ಜೋಳ, 1.34 ಲಕ್ಷ ಹೆಕ್ಟೇರ್ ನಲ್ಲಿ ಸಜ್ಜೆ ಸೇರಿದಂತೆ ವಿವಿಧ ಸಿರಿಧಾನ್ಯ ಸೇರಿದಂತೆ 20 ಲಕ್ಷ ಟನ್ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕೃಷಿ ಸುಸ್ಥಿರಗೊಳಿಸಲು ವಾಯುಗುಣ ಆಧಾರದವ ಮೇಲೆ ಉತ್ತಮ ಹಾಗೂ ಹೊಸಹೊಸ ತಳಿಗಳ ಅಭಿವೃದ್ದಿಪಡಿಸಬೇಕಿದೆ. ಕೇವಲ ಪ್ರಯೋಗಾಲಯಕ್ಕೆ ಸೀಮಿತಗೊಳಿಸಬಾರದು. ಲ್ಯಾಬ್ ಟೂ ಲ್ಯಾಂಡ್ ಆಗಬಾರದು. ಬದಲಾಗಿ ಲ್ಯಾಂಡ್ ಟೂ ಲ್ಯಾಂಡ್ ಅಗಬೇಕಿದ್ದು ರೈತರಿಗೆ ತಲುಪಬೇಕಿದೆ. ನಗರೀಕರಣ ಪರಿಣಾಮ ಶೇ.80ರಿಂದ ಇಂದು ಶೇ.60ರಷ್ಟು ಕೃಷಿ ಇಳುವರಿ ಕಡಿಮೆಯಾಗಿದೆ. ಕಡಿಮೆ ಇಳುವರಿಯಲ್ಲಿ ಹೆಚ್ಚು ಬೆಳೆ ಬೆಳೆಯಲು ಸಿರಿಧಾನ್ಯ ಸಹಕಾರವಾಗಲಿದೆ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಸಿರಿಧಾನ್ಯ ಅಂದು ಬಡವರ ಆಹಾರವಾಗಿದ್ದ ಸಿರಿಧ್ಯಾನಗಳು ಇಂದು ಅಂತಾರಾಷ್ಡ್ರೀಯ ಮಟ್ಟದ ಮಿಲೆಟ್ ಆಹಾರವಾಗಿ ಜನಪ್ರಿಯವಾಗಿದೆ. ರಾಜ್ಯದಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯ ರಫ್ತು, ಮೌಲ್ಯವರ್ಧಿತ ಆಹಾರ ಸಂಸ್ಕರಣೆಯಲ್ಲಿ ಸ್ಟಾರ್ಟಪ್ ಯೋಜನೆಯಡಿ10 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳಿಗೆ ಬೇಡಿಕೆ: ಸಂಸದೆ ಶೋಭಾ ಕರಂದ್ಞಾಜೆ ಮಾತನಾಡಿ, ಸಿರಿಧಾನ್ಯಗಳ ರಾಜ್ಯ ಕರ್ನಾಟಕ ಆಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಜನರಿಗೆ ಅರಿವಾಗುತ್ತಿದೆ. ಜಗತ್ತಿಗೆ ಯಾವುದೇ ಒಳ್ಳೆಯದು ಅದನ್ನು ಹರಡಬೇಕು. ಅದರಲ್ಲಿ ಸಿರಿಧ್ಯಾನ ಜೊತೆಗೆ ಯೋಗ, ಆರ್ಯುವೇದವನ್ನು ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿಗೆ ಪರಿಚಯಿಸಿದ್ದಾರೆ.
ಸಿರಿಧ್ಯಾನಗಳ ಬೀಜ, ಮೌಲ್ಯವರ್ಧನೆ ಹಾಗೂ ಸಂಸ್ಕರಣೆಯ ವಸ್ತುಗಳು ವಿಶ್ವದಲ್ಲಿ ಬೇಡಿಕೆಯಿದೆ. ನಾನಾ ದೇಶಗಳಿಂದ ಅಪಾರ ಬೇಡಿಕೆ ಉಂಟಾಗಿದೆ. 33 ಸಾವಿರ ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಾವಯವ ಹಾಗೂ ಆಹಾರ ಸಂಸ್ಕರಣೆ ಬಗ್ಗೆ ಯೋಜನಾ ವರದಿ ಸಿದ್ಧಪಡಿಸಿ ನೀಡಿದರೆ, ಈ ಬಗ್ಗೆ ಒತ್ತು ಕೊಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂಓದಿ: 1 ಕೋಟಿ ರೂ ವಾರ್ಷಿಕ ವೇತನದ ಉದ್ಯೋಗ ಪಡೆದ ಐಐಟಿ ಬಾಂಬೆಯ 85 ವಿದ್ಯಾರ್ಥಿಗಳು