ಬೆಂಗಳೂರು: ದೇಶಾದ್ಯಂತ ಹಸುಗಳಿಗೆ ಕಾಡಿದ ಚರ್ಮಗಂಟು ರೋಗದಿಂದಾಗಿ ಲಕ್ಷಾಂತರ ಹಸುಗಳು ತೀರಿಹೋಗಿದ್ದಾವೆ. ಹಸುಗಳು ಖಾಯಿಲೆಗೆ ಒಳಗಾಗಿ ಹಾಲು ಕೊಡಲಾಗದಂತಹ ಪರಿಸ್ಥಿತಿ ಇದ್ದು, ರೈತರು ಹೈನುಗಾರಿಕೆಯಿಂದ ವಿಮುಖರಾಗಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷದ ನೆರೆ ಪರಿಸ್ಥಿತಿಯಿಂದ ಮೇವು ಸಿಗದ ಹಿನ್ನೆಲೆ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಎಲ್ಲಾ ಕಾರಣದಿಂದ ಕರ್ನಾಟಕ ಸೇರಿದಂತೆ ಹೊರರಾಜ್ಯಗಳಲ್ಲಿ ಕ್ಷೀರ ಅಭಾವ ಉಂಟಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಹಾಲು, ಮೊಸರು, ತುಪ್ಪಕ್ಕೆ ಹಣ ಕೊಡುತ್ತೇವೆ ಎಂದರೂ ಸಿಗದಿರುವಷ್ಟು ಕೆಲವು ರಾಜ್ಯಗಳಲ್ಲಿ ಕೊರತೆ ಉಂಟಾಗಿದೆ. ಇದರಿಂದಾಗಿ ರಾಜ್ಯದ ನಂದಿನಿ ಹಾಲು ಗುಣಮಟ್ಟ ಹಾಗೂ ಕಡಿಮೆ ಬೆಲೆಯ ಕಾರಣದಿಂದ ಹೆಚ್ಚು ಹೆಚ್ಚು ಬೇಡಿಕೆಯಲ್ಲಿದೆ. ಆದರೆ ರಾಜ್ಯದಲ್ಲೂ ಚರ್ಮಗಂಟು ರೋಗ ಹಾಗೂ ಇತರೆ ಕಾರಣಗಳಿಂದ ಕೆಎಂಎಫ್ ಗುರಿ ಹಾಕಿಕೊಂಡಷ್ಟು ಹಾಲು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊರರಾಜ್ಯ, ಹೊರದೇಶದ ರಫ್ತು ಸ್ಥಗಿತಗೊಳಿಸಿ ಸ್ಥಳೀಯ ಮಾರುಕಟ್ಟೆಗೆ ಹಾಲು, ಬೆಣ್ಣೆ, ಮೊಸರು ತುಪ್ಪ ಪೂರೈಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಉತ್ತರ ಭಾರತದ ರಾಜ್ಯಗಳು ಕರ್ನಾಟಕದತ್ತ ಕೈ ಚಾಚುತ್ತಿವೆ. ಕೆಎಂಎಫ್ ಅಡಿಯಲ್ಲಿ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. 2022 ರಲ್ಲಿ ಜೂನ್ ತಿಂಗಳಲ್ಲಿ ದಿನವೊಂದಕ್ಕೆ 94 ಲಕ್ಷ ಲೀಟರ್ ಹಾಲು ಸಂಗ್ರಹಿಸಿತ್ತು. ಆದರೆ ಇದು ಏರಿಕೆಯಾಗಿ 99 ಲಕ್ಷ ಲೀಟರ್ ಗುರಿ ತಲುಪುವುದು ಕೆಎಂಎಫ್ನ ಲೆಕ್ಕಾಚಾರ ಆಗಿತ್ತು. ಆದರೆ, ಅದು ತಲೆಕೆಳಗಾಗಿದ್ದು, 94 ಲಕ್ಷ ಲೀಟರ್ ನಿಂದ ಹಾಲು ಸಂಗ್ರಹಣೆ 71.67 ಲಕ್ಷ ಲೀಟರ್‌ಗೆ ಕುಸಿದಿದೆ.
ಇನ್ನು, ನಂದಿನಿ ಬ್ರಾಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಬೇರೆಲ್ಲಾ ಬ್ರಾಂಡ್ಗಳಿಗೆ ಹೋಲಿಕೆ ಮಾಡಿದಾಗ ನಂದಿನಿ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟವನ್ನು ನೀಡುತ್ತಿದೆ. ಆದರೆ ಹಾಲು ಉತ್ಪಾದನೆಯಲ್ಲಿ ಕುಂಠಿತವಾಗಿರುವ ಕಾರಣ ಹಲವೆಡೆ ಹಾಲಿಗೆ ಕೊರತೆ ಉಂಟಾಗಿದೆ. ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ. ಇದೀಗ ಹಾಲಿನ ಕೊರತೆ ಉಂಟಾಗಿರುವುದರಿಂದ, ಇದರ ಮೌಲ್ಯವರ್ದಿತ ಉತ್ಪನ್ನಗಳಾದ ಬೆಣ್ಣೆ, ತುಪ್ಪ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ.
ಹೈದರಾಬಾದ್ ತಜ್ಞರಿಂದ ಸಿಸ್ಟಂ ಸರಿ ಮಾಡಿಸಲು ಹರಸಾಹಸ: ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ನಲ್ಲಿ (ಬಮೂಲ್) ಹಾಲು ಉತ್ಪಾದನೆ ಕುಸಿತಗೊಂಡಿದೆ. ಚರ್ಮ ಗಂಟು ರೋಗ, ಕೆಲ ತಾಂತ್ರಿಕ ಸಮಸ್ಯೆಗಳಿಂದ ನಗರದಲ್ಲಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ. ಹೈದರಾಬಾದ್ ತಜ್ಞರಿಂದ ಸಿಸ್ಟಂ ಸರಿ ಮಾಡಿಸಲು ಹರಸಾಹಸ ಪಡಲಾಗುತ್ತಿದೆ.
ಬೇಸಿಗೆಯ ಬಿಸಿಲಿನ ತಾಪ ಏರಿಕೆಯಾಗಿರುವುದರಿಂದ ರಾಜ್ಯದೆಲ್ಲೆಡೆ ನಂದಿನಿ ಮೊಸರು ಮಜ್ಜಿಗೆ ಹಾಲು ಭಾರಿ ಬೇಡಿಕೆ ಹೆಚ್ಚಾಗಿತ್ತು. ಆದರೆ ಇದೀಗ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ. ಹಾಲಿನ ಉತ್ಪಾದನೆಯು ದಿನಕ್ಕೆ ಸುಮಾರು 15 ಲಕ್ಷ ಲೀಟರ್‌ನಿಂದ 13 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ ಎಂದು ಕೆಎಂಎಫ್ ಎಂಡಿ ಸತೀಶ್ ಹೇಳಿದ್ದಾರೆ.
ಸದ್ಯ ತುಮಕೂರು, ಮಂಡ್ಯ, ಕೋಲಾರ ಹಾಲು ಒಕ್ಕೂಟಗಳು ಸಹ ಬೆಂಗಳೂರಿಗೆ ಹಾಲು ಪೂರೈಸುತ್ತಿವೆ. ಈ ಒಕ್ಕೂಟಗಳು ತಲಾ 2 ಲಕ್ಷದಿಂದ 3 ಲಕ್ಷ ಲೀಟರ್‌ನಷ್ಟು ಪ್ರತಿದಿನ ಪೂರೈಸುತ್ತಿವೆ. ಖಾಸಗಿ ಕಂಪನಿಗಳ ಹಾಲಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇರುವುದರಿಂದ ಕೆಲವು ಏಜೆಂಟರು ಸಿಹಿ ತಿಂಡಿಗಳನ್ನು ತಯಾರಿಕೆಗೆ ಹೆಚ್ಚು ಹಾಲನ್ನು ಪೂರೈಸುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಮುಲ್‌ಗೆ ಪೂರೈಕೆಯಾಗುವ ಹಾಲಿನಲ್ಲಿ ಸುಮಾರು 2 ಲಕ್ಷ ಲೀಟರ್ ಮೊಸರು ತಯಾರಿಸಲು, 20 ಸಾವಿರ ಲೀಟರ್ ಪನ್ನೀರ್, ಪೇಡೆ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಸದ್ಯ ಗ್ರಾಹಕರ ಬೇಡಿಕೆಯಷ್ಟು ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ. 15 ಲಕ್ಷ ಲೀಟರ್ ಬೇಡಿಕೆ ಇದೆ. ನಮಗೆ ಇನ್ನೂ 2 ಲಕ್ಷ ಲೀಟರ್‌ನಷ್ಟು ಕೊರತೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ಹಾಲು ಉತ್ಪಾದನೆ ಕುಂಠಿತ: ಜನವರಿ 13, 1970 ರಂದು ವರ್ಗಿಸ್ ಕುರಿಯನ್ ಅವರು ʼಆಪರೇಷನ್ ಫ್ಲಡ್’ ಹೆಸರಿನಲ್ಲಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿ ಯೋಜನೆಗೆ ನಾಂದಿ ಹಾಡಲಾಗಿತ್ತು. ಇದು ಭಾರತದಲ್ಲಿ ಶ್ವೇತ ಕ್ರಾಂತಿ ಅಥವಾ ಕ್ಷೀರ ಕ್ರಾಂತಿಗೆ ಕಾರಣವಾಗಿತ್ತು. ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳ, ಗ್ರಾಮೀಣ ಆದಾಯದಲ್ಲಿ ಹೆಚ್ಚಳ, ಗ್ರಾಹಕರಿಗೆ ನ್ಯಾಯಯುತ ಬೆಲೆ ಮತ್ತು ಹಾಲಿನ ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳವ ನಿಟ್ಟಿನಲ್ಲಿ ಕುರಿಯನ್ ಹೆಜ್ಜೆ ಮಹತ್ತರ ಬದಲಾವಣೆ ಮಾಡಿತು.
ಶ್ವೇತ ಕ್ರಾಂತಿಯಿಂದ ದೇಶದ ಅತ್ಯಂತ ಕಡಿಮೆ ಹಾಲು ಉತ್ಪಾದನೆ ತ್ವರಿತವಾಗಿ ಹೆಚ್ಚಾಯಿತು. ಉದ್ಯೋಗ ಸೇರಿದಂತೆ ಆರ್ಥಿಕ ಕ್ಷೇತ್ರದಲ್ಲಿ ಈ ವಲಯ ಎತ್ತರಕ್ಕೆ ಹೋಯಿತು. ಆದರೆ, ಇದೀಗ 1970ರ ಶ್ವೇತ ಕ್ರಾಂತಿಯ ಗುರಿ ಸಾಧನೆಗೆ ಚರ್ಮಗಂಟು ರೋಗ ತೀವ್ರ ಪೆಟ್ಟು ನೀಡಿದಂತಾಗಿದೆ. ನಂದಿನಿಯಂತೆ ಅಮೂಲ್ಗೂ ಸಹ ಕ್ಷೀರ ಕೊರತೆ ಬಾಧಿಸುತ್ತಿದೆ.
ಇದನ್ನೂ ಓದಿ: ಚರ್ಮಗಂಟು ರೋಗ: ಹೈನೋದ್ಯಮದ ಮೇಲೆ ಭಾರಿ ಪರಿಣಾಮ