ಬೆಂಗಳೂರು: ಕ್ಷೀರಭಾಗ್ಯ ಯೋಜನೆ ಅಡಿ ಅಂಗನವಾಡಿ ಮಕ್ಕಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿ ಮಾರಾಟ ಮಾಡಲು ಯತ್ನಿಸಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ವಿಜಯಪುರ ಪಟ್ಟಣ ಸಿಡಿಪಿಒ ನಿರ್ಮಲಾ ಹಾಗೂ ವಿಜಯಪುರ ಗ್ರಾಮಾಂತ ಸಿಡಿಪಿಒ ಗೀತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ಧ ಪೀಠ ಈ ಆದೇಶ ಮಾಡಿದೆ.
ಬಡ ಮಕ್ಕಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿಯನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂಬ ವಿಚಾರ ಅತ್ಯಂತ ಗಂಭೀರವಾದದ್ದು. ಹಾಗಿದ್ದೂ ಪ್ರಕರಣದ ಎಲ್ಲ ಆರೋಪಿಗಳಿಗೂ ನಿರೀಕ್ಷಣಾ ಅಥವಾ ಸಾಮಾನ್ಯ ಜಾಮೀನು ಸಿಕ್ಕಿರುವುದರಿಂದ ಈ ಇಬ್ಬರು ಅಧಿಕಾರಿಗಳಿಗೂ ಜಾಮೀನು ನೀಡಬಹುದಾಗಿದೆ. ಇನ್ನು ಆರೋಪಿಗಳಿಬ್ಬರು 2021ರ ಫೆ. 19ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿಯೇ ಇಟ್ಟುಕೊಂಡರೆ ಆರೋಪ ಸಾಬೀತಾಗುವ ಮುನ್ನವೇ ವಿಚಾರಣಾ ಪೂರ್ವ ಶಿಕ್ಷೆ ವಿಧಿಸಿದಂತಾಗುತ್ತದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಅಧಿಕಾರಿಗಳನ್ನು ಬಂಧ ಮುಕ್ತಗೊಳಿಸಿದ್ದಾರೆ.
ಇದನ್ನೂ ಓದಿ: ಸುಲಲಿತ ಜೀವನ ನಿರ್ವಹಣೆಗೆ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ
ಆರೋಪಿತ ಸಿಡಿಪಿಒಗಳು ತಲಾ ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಇಂತಹ ಕೃತ್ಯಗಳಲ್ಲಿ ಪುನಃ ಭಾಗಿಯಾಗಬಾರದು. ಸಾಕ್ಷ್ಯಗಳನ್ನು ಬೆದರಿಸಬಾರದು ಹಾಗೂ ನಾಶಪಡಿಸಬಾರದು. ಆರೋಪಿಗಳಿಬ್ಬರೂ ಪ್ರತಿ ತಿಂಗಳ 1 ಹಾಗೂ 15ರಂದು ಪೊಲೀಸ್ ಠಾಣೆಗೆ ತೆರಳಿ ರುಜು ಹಾಕಬೇಕು. ವಿಚಾರಣಾಧಿಕಾರಿಗಳು ಹಾಗೂ ನ್ಯಾಯಾಲಯ ಕರೆದಾಗ ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಕ್ಷೀರಭಾಗ್ಯ ಯೋಜನೆ ಅಡಿ ಮಕ್ಕಳಿಗೆ ವಿತರಿಸಬೇಕಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲಿನ ಪುಡಿಯನ್ನು ಜಮಖಂಡಿ ಪಟ್ಟಣದ ದೇವರಾಜ ಅರಸ್ ಹೋಟೆಲ್ ಹಿಂಭಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಅದನ್ನು ಗಿರೀಶ್ ಮಲ್ಲಪ್ಪ ತೇಲಿ ಹಾಗೂ ಇತರರು ಐಸ್ ಕ್ರೀಮ್ ಹಾಗೂ ಸಿಹಿ ತಿನಿಸು ತಯಾರಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಜಮಖಂಡಿ ಸಿಡಿಪಿಒ ಅನುರಾಧಾ ಜಮಖಂಡಿ ಠಾಣೆ ಪೊಲೀಸರಿಗೆ 2020ರ ಫೆ.20ರಂದು ದೂರು ನೀಡಿದ್ದರು.
ಇದನ್ನೂ ಓದಿ:ಇಬ್ಬರಿಗೂ ಒಪ್ಪಿಗೆಯಿದ್ದರೆ ಅದು ಅತ್ಯಾಚಾರವಾಗಲ್ಲ: ರೇಣುಕಾಚಾರ್ಯ
ದೂರಿನ ಮೇರೆಗೆ ಅವಶ್ಯಕ ವಸ್ತುಗಳ ಕಾಯ್ದೆ -1955 ಅಡಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಗಿರೀಶ್, ಮಾದೇವ ಹಾಗೂ ಗೋಪಾಲ ಸಿಕ್ಕಿಬಿದ್ದಿದ್ದರು. ಆರೋಪಿಗಳು ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್ಗಳನ್ನು ಒಡೆದು ಅದರಲ್ಲಿದ್ದ ಪುಡಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಐಸ್ ಕ್ರೀಮ್ ತಯಾರಕರಿಗೆ ಮಾರಾಟ ಮಾಡುತ್ತಿರುವುದು ಸ್ಪಷ್ಟವಾಗಿತ್ತು. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿದಾಗ ಸ್ಟೋರ್ ಕೀಪರ್, ಎಸ್ ಡಿಎ, ಎಫ್ ಡಿಎ, ಎಸ್ ಡಿಪಿಒ ಹಾಗೂ ಮೂವರು ಸಿಡಿಪಿಒ ಸೇರಿ ಹತ್ತು ಮಂದಿ ಬಲೆಗೆ ಬಿದ್ದಿದ್ದರು. ಅದರಂತೆ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ವಿಚಾರಣೆ ವೇಳೆ ಆರ್ಜಿದಾರರ ಪರ ವಾದಿಸಿದ್ದ ವಕೀಲರು, ಪ್ರಕರಣದ ಎಲ್ಲ ಆರೋಪಿಗಳಿಗೂ ನಿರೀಕ್ಷಣಾ ಅಥವಾ ಸಾಮಾನ್ಯ ಜಾಮೀನು ಸಿಕ್ಕಿದೆ. ಇನ್ನು ಆರೋಪಿತ ಅಧಿಕಾರಿಗಳು ಮಾರಾಟದಲ್ಲಿ ನೇರವಾಗಿ ಪಾಲ್ಗೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಮುಖ್ಯವಾಗಿ ಹಾಲಿನ ಪುಡಿಯನ್ನು ಜೋಪಾನ ಮಾಡುವ ಕೆಲಸ ಸ್ಟೋರ್ ಕೀಪರ್ ಹಾಗೂ ಎಸ್ ಡಿಪಿಒ ಕೆಲಸವಾಗಿದೆ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.