ಬೆಂಗಳೂರು: ಕೊರೊನಾ ಪ್ರಭಾವ ನೇರವಾಗಿ ಮಧ್ಯಮ ವರ್ಗಕ್ಕೆ ಬೀರಿದೆ. ಲಾಕ್ಡೌನ್ ನಂತರ ಆರ್ಥಿಕ ಸಮಸ್ಯೆ ಇನ್ನಿಲ್ಲದೇ ಕಾಡುತ್ತಿದೆ. ನನ್ನ ಪತಿಗೆ ಬರುವ ವೇತನದಲ್ಲಿ ಮೂವರು ಮಕ್ಕಳು, ಅತ್ತೆ, ಅಮ್ಮನನ್ನು ಸಾಕಿ ಸಲುಹಬೇಕಿದೆ. ಶಾಲೆ ಇಲ್ಲದ ಕಾರಣ ಮಕ್ಕಳು ಮನೆಯಲ್ಲೇ ಇದ್ದು, ಖರ್ಚು ಮತ್ತಷ್ಟು ದುಬಾರಿಯಾಗಿದೆ. ಹೀಗಾಗಿ, ಕುಟುಂಬ ನಿರ್ವಹಣೆ ಹೊರೆಯಾಗುತ್ತಿದೆ. ದಿಕ್ಕುತೋಚದ ಪರಿಸ್ಥಿತಿ ಎದುರಾಗಿದೆ.
ಉದ್ಯೋಗಸ್ಥ ಮಹಿಳೆ ಜನನಿ ಭರತ್ ಅವರು ಅಳಲು ತೋಡಿಕೊಂಡ ಪರಿ ಇದು. ಲಾಕ್ಡೌನ್ಗೂ ಮುನ್ನ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದೆವು. ನಾನು ಹೋಗುತ್ತಿದ್ದ ಖಾಸಗಿ ಕಂಪನಿಗೆ ಯಾವುದೇ ಆದಾಯ ಇಲ್ಲದ ಕಾರಣ, ಕೆಲಸದಿಂದ ತೆಗೆಯಲಾಯಿತು. ಇದರಲ್ಲಿ ಕಂಪನಿಯದ್ದೂ ತಪ್ಪೂ ಎಂದು ಹೇಳಲಾಗುತ್ತಿಲ್ಲ. ಆದಾಯ ಇಲ್ಲದ್ದಕ್ಕಾಗಿ ಕಂಪನಿಯೂ ಸ್ಥಗಿತಗೊಂಡಿದೆ. ಹೀಗಾಗಿ, ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಬರಬೇಕಿದೆ.
ಹಿರಿಯರಿಗೆ ಪೌಷ್ಟಿಕ ಆಹಾರ, ಮಾತ್ರೆಗಳನ್ನು ಖರೀದಿಸಬೇಕಿದೆ. ಗಂಡ ಆರೋಗ್ಯ ಸೇವೆಯಲ್ಲಿ ಇರುವ ಕಾರಣ ಹೆಚ್ಚು ಶುಚಿತ್ವ, ಮಾಸ್ಕ್, ಸ್ಯಾನಿಟೈಸರ್ ವೆಚ್ಚ ದ್ವಿಗುಣಗೊಂಡಿದೆ. ಈ ಮೂಲಕ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ತರಕಾರಿ ಬೆಲೆ ಏರಿಕೆ ಕಂಡಿದೆ. ಈರುಳ್ಳಿ ಬೆಲೆಯಂತೂ ಕೇಳೋದೆ ಬೇಡ. ಶಾಲೆಗಳಿಲ್ಲದಿದ್ದರೂ ಶುಲ್ಕ ಕಟ್ಟಬೇಕಿದೆ. ಹೀಗಾದರೆ ಎಲ್ಲಿಂದ ದುಡ್ಡು ತರೋದು ಎಂದು ನೋವು ತೋಡಿಕೊಂಡರು.
ಮಧ್ಯಮ ವರ್ಗದ ನಾವೇ ಇಷ್ಟು ಕಷ್ಟ ಪಡುತ್ತಿದ್ದೇವೆ ಎಂದರೆ ಬಡವರ ಪರಿಸ್ಥಿತಿ ಹೇಗೀರಬೇಡ. ಊಹಿಸಲು ಸಾಧ್ಯವಾಗಲ್ಲ ಎಂಬಂತಿದೆ ಎಂದರು. ಇತ್ತ ಸರ್ಕಾರಿ ಸೌಲಭ್ಯಗಳು ಸಿಗದೇ, ಕೈಲಿ ಕಾಸಿಲ್ಲದೇ, ಇರುವ ಸಣ್ಣಪುಟ್ಟ ಚಿನ್ನಾಭರಣವನ್ನು ಅಡವಿಟ್ಟು ಮಧ್ಯಮ ವರ್ಗದ ಜನ ದಿನ ದೂಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ದಿನಸಿ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಹೈಟೆಕ್ ಆಸ್ಪತ್ರೆಗಳ ಬಿಲ್ಗೆ ಹೆದರಿ ಆಯುರ್ವೇದಿಕ್ ಮಾತ್ರೆಗಳಿಗಾಗಿ ಜನ ಮುಗಿ ಬೀಳುತ್ತಿದ್ದಾರೆ.
ಕೊರೊನಾ ಭೀತಿಯಿಂದ ಆರೋಗ್ಯ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಡ್ರೈ ಫ್ರೂಟ್ಸ್ ಖರೀದಿ ಅನಿವಾರ್ಯವಾಗಿದೆ. ಆದರೆ, ಅವುಗಳ ಬೆಲೆ ದುಪ್ಪಟ್ಟಿರುವ ಕಾರಣ ಮಧ್ಯಮ ವರ್ಗದ ಜನತೆ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇತ್ತ ಆರೋಗ್ಯದ ಕಡೆ ಗಮನ ಹರಿಸಿದ್ದರೆ ಆಸ್ಪತ್ರೆ ಶುಲ್ಕ ಬರಿಸುವ ಮಾತು ಅಸಾಧ್ಯ.