ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನು ಒಂದೇ ದಿನ ಬಾಕಿ, 2023ಕ್ಕೆ ಗುಡ್ ಬೈ ಹೇಳಿ 2024ನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ. ಪಾರ್ಟಿ ಪ್ರಿಯರ ನೆಚ್ಚಿನ ನಗರಿ, ಪಬ್ ಕ್ಯಾಪಿಟಲ್ ಎಂದೇ ಫೇಮಸ್ ಆಗಿರುವ ಬೆಂಗಳೂರು ಸಹ ಹೊಸ ವರ್ಷದ ವರ್ಷ ಸಂಭ್ರಮಾಚರಣೆಗೆ ನೆಚ್ಚಿನ ತಾಣ. ದೇಶದ ನಾನಾ ಭಾಗಗಳಿಂದ ಬರುವ ಜನರು ಬೆಂಗಳೂರಲ್ಲಿ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಅದರಲ್ಲೂ ಸಿಲಿಕಾನ್ ಸಿಟಿಯ ಕೆಲ ಸ್ಥಳಗಳು ಸಂಭ್ರಮಾಚರಣೆಗೆ ಫೇಮಸ್. ಈ ಕುರಿತು ಒಂದು ವರದಿ.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ: ಬೆಂಗಳೂರಿನಲ್ಲಿ ನ್ಯೂ ಇಯರ್ ಸಂಭ್ರಮಕ್ಕೆ ನೆಚ್ಚಿನ ಸ್ಥಳಗಳೆಂದರೆ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ. ಪ್ರಖ್ಯಾತ ಬ್ರ್ಯಾಂಡ್ಗಳ ಮಳಿಗೆಗಳು, ಶಾಫಿಂಗ್ ಕಾಂಪ್ಲೆಕ್ಸ್, ರೆಸ್ಟೋರೆಂಟ್, ಪಬ್ಗಳನ್ನು ಹೊಂದಿರುವ ಈ ಎರಡೂ ರಸ್ತೆಗಳು ಹೊಸ ವರ್ಷಾಚರಣೆಯಲ್ಲಿ ಹೆಚ್ಚು ಜನರನ್ನ ಆಕರ್ಷಿಸುತ್ತವೆ. ವರ್ಷಾಂತ್ಯದ ದಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳು ವರ್ಣರಂಜಿತ ದೀಪಾಲಂಕಾರ, ಮ್ಯೂಸಿಕ್ ಸಹಿತ ಜನರು ಕಿಕ್ಕಿರಿದು ಸೇರುವ ಹಾಟ್ಸ್ಪಾಟ್ ಗಳೆಂದೇ ಪ್ರಸಿದ್ಧಿ ಪಡೆದಿವೆ.
ಇಂದಿರಾ ನಗರ ಹಾಗೂ ಕೋರಮಂಗಲ: ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯ ಬಳಿಕ ಇಂದಿರಾ ನಗರ ಹಾಗೂ ಕೋರಮಂಗಲ ಗಮನ ಸೆಳೆಯುತ್ತವೆ. ಸಾಕಷ್ಟು ಬಗೆಯ ರೆಸ್ಟೋರೆಂಟ್, ಪಬ್, ಮಾಲ್ಗಳನ್ನು ಹೊಂದಿರುವ ಈ ಸ್ಥಳಗಳಲ್ಲಿ ಸ್ಥಳೀಯ ಮಾರುಕಟ್ಟೆಯನ್ನು ಸಹ ಕಾಣಬಹುದು. ಫ್ಯಾಮಿಲಿಯೊಂದಿಗೆ ಸಂಭ್ರಮಾಚರಣೆ ಮಾಡಲು ಬಯಸುವವರು ಹೆಚ್ಚು ಇಂದಿರಾ ನಗರ ಹಾಗೂ ಕೋರಮಂಗಲಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಯುಬಿ ಸಿಟಿ: ಯುಬಿ ಟವರ್ ಅಥವಾ ಯುಬಿ ಸಿಟಿ ಬೆಂಗಳೂರಿನ ಎತ್ತರದ ಐಷಾರಾಮಿ ಮಾಲ್ ಆಗಿದೆ. ವಿಶ್ವದ ಖ್ಯಾತ ಪ್ರೀಮಿಯಂ ಬ್ರ್ಯಾಂಡ್ಗಳ ಅಧಿಕೃತ ಮಳಿಗೆಗಳನ್ನು ಹೊಂದಿರುವ ಯುಬಿ ಸಿಟಿ ಹೈಫೈ ಪಾರ್ಟಿ ಪ್ರಿಯರ ನೆಚ್ಚಿನ ಸ್ಥಳ. ಪ್ರತೀ ಬಾರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯುಬಿ ಸಿಟಿಯಲ್ಲಿ ಐಷಾರಾಮಿ ರೂಫ್ ಟಾಪ್ ಪಾರ್ಟಿ, ಡಿಜೆ ಮ್ಯೂಸಿಕ್ ಆಯೋಜನೆಯಾಗಲಿದ್ದು, ಬೆಂಗಳೂರಿನ ನೈಟ್ ಲೈಫ್ ಸೌಂದರ್ಯ ಸವಿಯುತ್ತ ಪಾರ್ಟಿ ಎಂಜಾಯ್ ಮಾಡಲು ಅನೇಕ ಜನರನ್ನ ತನ್ನತ್ತ ಸೆಳೆಯುತ್ತದೆ.
ಎಲೆಕ್ಟ್ರಾನಿಕ್ ಸಿಟಿ / ವೈಟ್ ಫೀಲ್ಡ್: ಅನೇಕ ಸಾಫ್ಟ್‌ವೇರ್ ಕಂಪನಿಗಳು ಹಾಗೂ ಅದರ ಉದ್ಯೋಗಿಗಳಿಗೆ ಆಶ್ರಯತಾಣವಾಗಿರುವ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ ಫೀಲ್ಡ್ ಸಹ ಹೊಸ ವರ್ಷದ ಪಾರ್ಟಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆಧುನಿಕ ಶೈಲಿಯ ಸಾಕಷ್ಟು ಪಬ್, ರೆಸ್ಟೋರೆಂಟ್, ಕೆಫೆ, ರೆಸ್ಟೋಬಾರ್ ಗಳನ್ನೊಳಗೊಂಡಿರುವ ಈ ಏರಿಯಾಗಳಲ್ಲಿಯೂ ಹೊಸ ವರ್ಷಾಚರಣೆಯ ಸಂಭ್ರಮ ಜೋರಾಗಿರುತ್ತದೆ. ಡಿಸೆಂಬರ್ 31ರಂದು ಪಾರ್ಟಿ ಪ್ರಿಯರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಈ ಏರಿಯಾಗಳು ಸಹ ಇವೆ.
ಈಗಾಗಲೇ ಹೊಸ ವರ್ಷಾಚರಣೆ ತಯಾರಿ ಆರಂಭವಾಗಿದ್ದು, ಪಾರ್ಟಿ ಪ್ರಿಯರ ನೆಚ್ಚಿನ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ, ಝಗಮಗಿಸುವ ಚಿತ್ತಾರದ ಅಲಂಕಾರಗಳನ್ನ ಮಾಡಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಅಲಂಕೃತಗೊಂಡಿವೆ. ಮತ್ತೊಂದೆಡೆ ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸುತ್ತಿದ್ದು, ನಾಳಿನ ಪಾರ್ಟಿ ಪ್ರಿಯರಿಗೆ ತೊಂದರೆಯಾಗದಂತೆ ಹಾಗೂ ಅನಗತ್ಯ ಘಟನೆಗಳನ್ನ ನಿಯಂತ್ರಿಸುವ ಉದ್ದೇಶದಿಂದ ಹೋಟೆಲ್, ಕ್ಲಬ್, ಪಬ್ ಗಳಿಗೆ ರಾತ್ರಿ 1 ಗಂಟೆಯೊಳಗೆ ಕಾರ್ಯ ಚಟುವಟಿಕೆಗಳನ್ನ ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಖಾಕಿ ಸರ್ಪಗಾವಲು: ನಾಳೆ ನಗರದ ಬಹುತೇಕ ಎಲ್ಲಾ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದು, ಇಬ್ಬರು ಹೆಚ್ಚುವರಿ ಆಯುಕ್ತರಿಗೆ ಭದ್ರತೆಯ ನೇತೃತ್ವ ವಹಿಸಲಾಗಿದೆ. ಅಲ್ಲದೆ ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿ, 160 ಇನ್ಸ್‌ಪೆಕ್ಟರ್ಸ್, 600 ಪಿಎಸ್ಐಗಳು, 600 ಎಎಸ್ಐಗಳು, 1800 ಹೆಡ್ ಕಾನ್ಸ್ಟೇಬಲ್ಸ್, 5200 ಪೊಲೀಸ್ ಕಾನ್ಸ್ಟೇಬಲ್ಸ್ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಯಾಗಲಿದ್ದಾರೆ.
ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಇಂದಿರಾ ನಗರ ಹಾಗೂ ಕೋರಮಂಗಲಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಲಿದ್ದು, ಈಗಾಗಲೇ 8 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಉಳಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸರಿಗೆ ಸಾಥ್ ನೀಡಲಿದ್ದಾರೆ. ಪ್ರಮುಖ ಸ್ಥಳದಲ್ಲಿ ಡ್ರೋನ್ ಕ್ಯಾಮರಾಗಳ ಮೂಲಕ ಹದ್ದಿನಕಣ್ಣಿರಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪರಾಧ ಹಿನ್ನೆಲೆಯುಳ್ಳವರು, ಮಾದಕ ಸರಬರಾಜುಗಾರರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ. ಪಬ್, ಬಾರ್, ಕ್ಲಬ್ ಗಳನ್ನ ಪ್ರವೇಶಿಸುವವರ ಹೆಸರು, ವಿಳಾಸದ ಮಾಹಿತಿಗಳನ್ನ ಪಡೆಯಲಾಗುವುದು ಎಂದು ಈಗಾಗಲೇ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಭೀತಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಲು ಹೈಕೋರ್ಟ್ ನಕಾರ