ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿತು.
ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವ ಹೊಣೆ ಹೊತ್ತಿರುವ ಎಡಿಜಿಪಿಗೆ ಜಾಮೀನು ನೀಡಬಾರದು ಎಂದು ಸಿಐಡಿಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ನ್ಯಾಯಾಲಯದಲ್ಲಿ ಬಲವಾಗಿ ವಾದಿಸಿ ಮನವಿ ಮಾಡಿದ್ದು, ಈ ಮನವಿ ಪರಿಗಣಿಸಿದ ಕೋರ್ಟ್ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಕಳೆದವಾರ 20 ರಂದು ಕಾಯ್ದಿರಿಸಿದ್ದ ತೀರ್ಪನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಆನಂದ್ ಟಿ.ಚವ್ಹಾಣ್ ಅವರು ಸೋಮವಾರ ಪ್ರಕಟಿಸಿ ಜಾಮೀನು ಅರ್ಜಿ ವಜಾ ಮಾಡಿದರು.
ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಈಗಾಗಲೇ ಪ್ರಕರಣದ ಸಹ ಆರೋಪಿಗಳಿಗೆ ಬೆದರಿಕೆ ಒಡ್ಡಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ. ತಮ್ಮ ಹೆಸರು ಬಹಿರಂಗ ಪಡಿಸಬಾರದು, ಒಂದೊಮ್ಮೆ ಹೆಸರು ಹೇಳಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನುವ ಸಂಗತಿಯನ್ನು ಕೋರ್ಟ್ ಗಮನಕ್ಕೆ ತಂದಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಜಾಮೀನು ನೀಡದಂತೆ ವಾದಿಸಿದ್ದರು.