ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಸಾವನ್ನಪ್ಪಿದ ತೇಜಸ್ವಿನಿ ಅವರ ಶವ ಸ್ವೀಕರಿಸುವ ಮುನ್ನ ಆಕೆಯ ಪತಿ ಹಾಗೂ ಪೋಷಕರು ಪ್ರತಿಭಟಿಸಿದ ಘಟನೆ ಮಂಗಳವಾರ ತಡರಾತ್ರಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಬಳಿ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸುವ ಮುನ್ನ ತೇಜಸ್ವಿನಿ ತಂದೆ ಹಾಗೂ ಪತಿ ತಮ್ಮ ಆಕ್ರೋಶ ಹೊರಹಾಕಿದರು.
ಆಸ್ಪತ್ರೆ ಬಳಿ ಮಾತನಾಡಿದ ಮೃತ ತೇಜಸ್ವಿನಿ ಅವರ ತಂದೆ ಮದನ್ 'ಅಷ್ಟು ದೊಡ್ಡ ಪಿಲ್ಲರ್ ನಿರ್ಮಾಣ ಮಾಡುವಾಗ ಯೋಚನೆ ಮಾಡಬೇಕು. ಟೆಂಡರ್ ಯಾರು ಕೊಟ್ಟವರು?, ಆ ಅಧಿಕಾರಿಗಳು ಯಾರು?, ಬೆಂಗಳೂರಿನಲ್ಲಿ ಓಡಾಡೋಕೆ ಕಷ್ಟ ಆಗ್ತಾ ಇದೆ. ಟೆಂಡರ್ನ ಬ್ಲಾಕ್ ಲೀಸ್ಟ್ ಮಾಡಲಿ. ಮುಖ್ಯ ಮಂತ್ರಿಗಳು ಬರುವವರೆಗೂ ಮೃತದೇಹಗಳನ್ನ ಸ್ವೀಕರಿಸುವುದಿಲ್ಲ. ಪರಿಹಾರವೆಂದು ಕೊಡುವ ಹಣವನ್ನ ನಾನೇ ಕೊಡುತ್ತೇನೆ. ಹೋದ ಜೀವ ವಾಪಸ್ ತರಲಾಗುತ್ತದೆಯೇ? ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ
ಅವಘಡ ನೆನೆದು ಕಣ್ಣೀರಿಟ್ಟ ಪತಿ: ಮೃತ ತೇಜಸ್ವಿನಿ ಅವರ ಪತಿ ಲೋಹಿತ್ ಮಾತನಾಡಿ, 'ನನ್ನ ಹೆಂಡತಿ ಪಿಲ್ಲರ್ ಬೀಳ್ತಾ ಇದೆ ಅಂತಾ ಹೇಳಿದ್ಳು. ಆದರೆ ಅಷ್ಟೋತ್ತಿಗೆ ಈತರ ಆಗಿ ಹೋಯಿತು. ನನ್ನ ಮುಂದೆ ಹೋಗ್ತಾ ಇರೋರು ಕೂಡ ಸನ್ನೆ ಮಾಡಿದರು. ನಾನೇ ಹೋಗಿದ್ದರೆ ಚೆನ್ನಾಗಿ ಇರೋದು. ಆದರೆ ನನ್ನ ಹೆಂಡತಿ ಮಗನನ್ನ ಕಳೆದುಕೊಂಡೆ' ಎಂದು ಅವಘಡ ನೆನೆದು ಕಣ್ಣೀರಿಟ್ಟರು.
ಮಾತ್ರವಲ್ಲದೇ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಮೃತದೇಹವನ್ನ ಸ್ವೀಕರಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಪೊಲೀಸರ ಮನವೊಲಿಕೆ ಬಳಿಕ ತೇಜಸ್ವಿನಿ ಕುಟುಂಬಸ್ಥರು ಮೃತದೇಹವನ್ನ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಗುಣಮಟ್ಟದ ಪರೀಕ್ಷೆಗೆ ಐಐಎಸ್ಸಿಗೆ ಮನವಿ
ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ನಿನ್ನೆ(ಮಂಗಳವಾರ) ಬೆಳಗ್ಗೆ 10:30ರ ಸುಮಾರಿಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್, ಪತ್ನಿ ತೇಜಸ್ವಿನಿ ಮತ್ತು ಇಬ್ಬರು ಅವಳಿ ಮಕ್ಕಳೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರನೇ ಕುಸಿದಿದೆ. ಘಟನೆಯಲ್ಲಿ ತೇಜಸ್ವಿನಿ (35) ಮತ್ತು ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಪಾರಾಗಿದ್ದರು.