ಬೆಂಗಳೂರು: ನಗರದಲ್ಲಿ ಇಂದಿನಿಂದ ನಮ್ಮ ಮೆಟ್ರೋ ಸೇವೆ ಪುನರಾರಂಭಗೊಂಡಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯ ವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಮೆಟ್ರೋ ಸಂಚರಿಸಲಿದೆ.

ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ ಇದ್ದು, ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶ ಕಲ್ಪಿಸಲಾಗಿದೆ. ಮೆಟ್ರೋದ ಮೊದಲ ಹಂತದ ರೈಡ್ನಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ತನಕ ಸುಮಾರು 17,988 ಪ್ರಯಾಣಿಕರು ಸಂಚರಿಸಿದ್ದಾರೆ. ಕ್ಯಾಶ್‌ಲೆಸ್ ವ್ಯವಹಾರಕ್ಕೆ ಮೊದಲ ಆದ್ಯತೆ ನೀಡಲಾಗಿದೆ.

ಮೆಟ್ರೋ ಸೇವೆ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿದೇಶಕ ರಾಕೇಶ್ ಸಿಂಗ್ ಮತ್ತು ಅಧಿಕಾರಿಗಳು ಮೆಟ್ರೋದಲ್ಲಿ ಸಂಚಾರ ಮಾಡಿದರು. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿಂದ ಬಿ.ಆರ್.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧದವರೆಗೆ ಪ್ರಯಾಣಿಸಿ, ಜನರ ಅನುಭವದ ಬಗ್ಗೆ ವಿಚಾರಿಸಿದರು.