ಬೆಂಗಳೂರು : ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿ - ಚಲ್ಲಘಟ್ಟ ಹಾಗೂ ಮಿಸ್ಸಿಂಗ್ ಲಿಂಕ್ ಎನ್ನಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮಾರ್ಗದಲ್ಲಿ ಜನಸಂಚಾರ ಪ್ರಾರಂಭವಾಗಿದ್ದು, ಮೊದಲ ದಿನ ಹೆಚ್ಚುವರಿ ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟಾರೆ ನೇರಳೆ ಮಾರ್ಗ ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) ಪೂರ್ಣ ಪ್ರಮಾಣದಲ್ಲಿ ಆರಂಭವಾದಂತಾಗಿದ್ದು, ಸೋಮವಾರ ಪ್ರಯಾಣಿಸಿದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 5ಗಂಟೆಗೆ ಮೊದಲ ರೈಲು ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು. ಸಹಜವಾಗಿ ಮೆಟ್ರೋದಲ್ಲಿ ಪ್ರತಿದಿನ 6.30ಲಕ್ಷ ಜನ ಸಂಚರಿಸುತ್ತಿದ್ದು, ಸೋಮವಾರ ಸರಿಸುಮಾರು 6.75 ಲಕ್ಷ ಜನ ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇವಲ 1 ಗಂಟೆ 20 ನಿಮಿಷದಲ್ಲಿ ಚಲ್ಲಘಟ್ಟ- ವೈಟ್‌ಫೀಲ್ಡ್ ತಲುಪಲು ಸಾಧ್ಯವಾಗುತ್ತಿರುವುದು ನಗರದ ಜನತೆಗೆ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.
ಬೆಳಗ್ಗೆ ಮೊದಲ ರೈಲಿನಲ್ಲಿ ಸಂಚಾರ ಮಾಡಿದ ಖಾಸಗಿ ಸಂಸ್ಥೆಯ ಉದ್ಯೋಗಿ ಜ್ಯೋತಿ ಮಾತನಾಡಿ, ಬಹಳ ದಿನಗಳಿಂದ ಈ ಮಾರ್ಗದ ಆರಂಭಕ್ಕೆ ಕಾಯುತ್ತಿದ್ದೆವು. ಆದಷ್ಟು ಬೇಗ ಪ್ರಾರಂಭಿಸಲು ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಿನ ಚರ್ಚೆಯಾಗಿತ್ತು. ಇದೀಗ ಮಾರ್ಗದಲ್ಲಿ ಪ್ರಯಾಣಿಸುತ್ತಿರುವುದು ತೃಪ್ತಿಕರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಚಲ್ಲಘಟ್ಟದಿಂದ ಕೆಂಗೇರಿವರೆಗೆ ಆಟೋರಿಕ್ಷಾ ಮೂಲಕ ತೆರಳಿ ಮೆಟ್ರೋ ಹತ್ತುತ್ತಿದ್ದ ವಿದ್ಯಾರ್ಥಿಗಳು ಹೊಸ ಮಾರ್ಗ ಆರಂಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಎರಡು ಮಾರ್ಗಗಳ ಸಂಚಾರ ಆರಂಭವಾಗಿರುವುದರಿಂದ ವೈಟ್ಫೀಲ್ಡ್ನಿಂದ ಚಲ್ಲಘಟ್ಟದವರೆಗೆ ಯಾವುದೇ ತಡೆ ಇಲ್ಲದೇ ಮೆಟ್ರೋದಲ್ಲಿ ಸಂಚರಿಸಬಹುದಾಗಿದೆ. ವಿಸ್ತೃತ ಮೆಟ್ರೋದಲ್ಲಿ ವೈಟ್‌ಫೀಲ್ಡ್ - ಚಲ್ಲಘಟದ ಮಧ್ಯೆ 43.49 ಕಿಮೀ ದೂರುವನ್ನು 80 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದ್ದು, 57 ರೂಪಾಯಿ ಟಿಕೆಟ್ ದರವಿದೆ.
ವೈಟ್‌ಫೀಲ್ಡ್-ಚಲ್ಲಘಟ ಮಾರ್ಗದಲ್ಲಿ ಸುಮಾರು 39 ಮೆಟ್ರೋ ಸ್ಟೇಷನ್ಗಳಿವೆ. ಟರ್ಮಿನಲ್ ಸ್ಟೇಷನ್ನಿಂದ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ. ರಾತ್ರಿ 10.45ಕ್ಕೆ ಕೊನೆಯ ಮೆಟ್ರೋ ರೈಲು ಲಭ್ಯವಿರಲಿದೆ. ಪ್ರತಿ 10 ನಿಮಿಷಕ್ಕೊಂದು ರೈಲು ಸೇವೆ ನೀಡಲಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆ ಚಾಲನೆಗೆ ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ, ಸರಳವಾಗಿ ಈ ಮಾರ್ಗದಲ್ಲಿ ಸೇವೆ ಆರಂಭಿಸಿರುವುದು ವಿಶೇಷವಾಗಿದೆ. ಸರ್ಕಾರದ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆ ಶುರು ಮಾಡುವಂತೆ ಬಿಎಂಆರ್‌ಸಿಎಲ್ ಸೂಚನೆ ನೀಡಿತ್ತು.
ಇದನ್ನೂ ಓದಿ : Bengaluru Purple Line metro: ವೈಟ್‌ಫೀಲ್ಡ್ - ಚಲ್ಲಘಟ ಮಧ್ಯೆ ಮೆಟ್ರೋ ಸೇವೆ ಆರಂಭ.. ಹೀಗಿದೆ ಟಿಕೆಟ್ ದರ, ವೇಳಾಪಟ್ಟಿ