ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದುಬಿದ್ದು ತಾಯಿ-ಮಗು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ನಿರ್ಲಕ್ಷ್ಯ ವಹಿಸಿದ ತಪ್ಪಿತಸ್ಥರನ್ನು ಹುಡುಕುವುದೇ ಪೊಲೀಸರಿಗೆ ಸವಾಲಾಗಿದೆ. ಈ ದುರಂತದಲ್ಲಿ ನಿರ್ಲಕ್ಷ್ಯ ಕಂಡುಬಂದರೂ ಯಾರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ನಿಖರವಾಗಿ ಪೊಲೀಸರು ಗುರುತಿಸಲು ಸಾಧ್ಯವಾಗುತ್ತಿಲ್ಲ.
ಮೆಟ್ರೊ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿರುವ ನಾಗಾರ್ಜುನ ಕನ್ಸ್ಟ್ರಕ್ಚನ್ ಕಂಪನಿಯ (ಎನ್‌ಸಿಸಿ) ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿದಾಗ ತಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಎಂಸಿಆರ್ ಹಿರಿಯ ಅಧಿಕಾರಿಗಳನ್ನು ಕೇಳಿದರೆ ನಾವು ಎನ್‌ಸಿಸಿ ಕಂಪನಿಗೆ ಗುತ್ತಿಗೆ ನೀಡಿದ್ದು ನಮ್ಮ ಕಡೆಯಿಂದ ತಪ್ಪು ಎಸಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಹೈದರಬಾದ್ ಐಐಟಿ ತಂಡ ಪರಿಶೀಲನೆ ನಡೆಸಿ ನೀಡಿದ ಪ್ರಾಥಮಿಕ ವರದಿಯಲ್ಲಿ ಸರಿಯಾದ ಆಧಾರ ಕೊಡದಿರುವುದು ಪಿಲ್ಲರ್ ಕುಸಿಯಲು ಕಾರಣ ಎಂದು ಹೇಳಿತ್ತು. ಅಲ್ಲದೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಎಎಸ್ಸಿ) ಅವೈಜ್ಞಾನಿಕ ಕಾಮಗಾರಿಯಿಂದ ಮೆಟ್ರೋ ಕಂಬ ಬೀಳಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ನಾನವನಲ್ಲ, ನಾನವನಲ್ಲ.. ಇದು ಅಧಿಕಾರಿಗಳ ಮಾತು: ಇದು ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ದುರಂತದ ಸಾವಿನ ಕೇಸ್ನಲ್ಲಿ ಅಧಿಕಾರಿಗಳ ಮಾತಿನ ಶೈಲಿಯಾಗಿದೆ. ಈ ದುರಂತದ ಜವಾಬ್ದಾರಿ ಹೊತ್ತಿಕೊಳ್ಳುವುದರಿಂದ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿರ್ಲಕ್ಷ್ಯದ ಕಾಮಕಾರಿ ಒಪ್ಪಿಕೊಳ್ಳೋಕೆ ಯಾರೂ ತಯಾರೇ ಇಲ್ಲದಂತಾಗಿದ್ದು ತಾಯಿ ಮಗುವಿನ ಸಾವಿಗೆ ಹೊಣೆ ಯಾರು ಎಂಬುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದೆ.
ನಾಗವಾರ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ದುರಂತ ಅಂತ್ಯ ಕಂಡ ಘಟನೆ ನಡೆದು ಒಂದು ತಿಂಗಳೇ ಕಳೆದಿದೆ. ಆದರೆ ಇದುವರೆಗೂ ಅಧಿಕಾರಿಗಳ ವಿಚಾರಣೆ ನಡೆಯುತ್ತಿದ್ದೆಯೇ ವಿನಃ ,ಯಾರೊಬ್ಬರ ಮೇಲೂ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ ನಾವು ಗುತ್ತಿಗೆ ಕೊಟ್ಟಿದ್ದೀವಿ ನಮಗೆ ಜವಾಬ್ದಾರಿ ಬರೋಲ್ಲ ಎಂದು ಬಿಎಂಆರ್ ಸಿಎಲ್ ವರಸೆಯಾಗಿದೆ. ಜೊತೆಗೆ ಕಾಮಗಾರಿ ಕಾರ್ಯ ಒಳ್ಳೇ ರೀತಿಯಲ್ಲೇ ಸಾಗಿತ್ತು. ನಮ್ಮ ತಪ್ಪಲ್ಲ ಅಂತ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ನುಣುಚಿಕೊಳ್ಳುತ್ತಿದೆ.
ಇದುವರೆಗೂ ಒಟ್ಟು ಏಳು ಬಿಎಂಆರ್ ಸಿಎಲ್ ಅಧಿಕಾರಿಗಳು, 18 ಮಂದಿ ಎನ್‌ಸಿಸಿ ವರ್ಗದ ಸಿಬ್ಬಂದಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಹೇಳಿಕೆಯನ್ನು ಪಡೆಯಲಾಗಿದೆ. ಈ ಮಧ್ಯೆ ಎಲ್ಲರೂ ಕೆಲಸದ ಬಗ್ಗೆ ಸಮರ್ಥನೆಯ ಉತ್ತರ ಕೊಡುತ್ತಿದ್ದಾರೆ. ಇನ್ನು ಕೆಲ ಬಿಎಂಆರ್ ಸಿಎಲ್ ಅಧಿಕಾರಿಗಳನ್ನು ವಿಚಾರಣೆ ಮಾಡಿದ್ದು, ಎನ್ ಸಿಸಿ ಮೇಲೆ ಬೊಟ್ಟು ಮಾಡಿದ್ದಾರೆ.
ಇದೇ ಕಾರಣಕ್ಕೆ ಪ್ಲಾನಿಂಗ್ ಡಿಸೈನ್ ಕೊಟ್ಟಿದ್ದ ಬಗ್ಗೆಯೂ ದಾಖಲೆ ಪಡೆದ ಪೊಲೀಸರು, ಡಿಸೈನ್ ಕೊಟ್ಟಿದ್ದ ಸ್ಮೆಕ್ ಕಂಪನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಹಾಗೇ ಪ್ಲಾನಿಂಗ್ ಕೊಟ್ಟಿದ್ದ ಮತ್ತೊಂದು NECOM ಎಂಬ ಕಂಪನಿಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತಿದೆ. 33 ಕಿಲೋ ಮೀಟರ್ ವರೆಗೂ ಮೂರು ಹಂತದ ಟೆಂಡರ್ ಪ್ರಕ್ರಿಯೆಯನ್ನು ನಾಗಾರ್ಜುನ ಕಂಪನಿಯವರೇ ಪಡೆದ್ದಾರೆ. ಈ ನಡುವೆ ಪೊಲೀಸ್ ಕಮಿಷನರ್ ತನಿಖೆ ನಡೆಯುತ್ತಿದೆ ಅಂತಷ್ಟೇ ಉತ್ತರಿಸಿದ್ದಾರೆ.
ಈ ವಾರದಲ್ಲಿ ಮತ್ತೊಂದು ಸಂಪೂರ್ಣ ವರದಿಯ ಐಐಟಿಯ ತನಿಖಾ ರಿಪೋರ್ಟ್ ಪೊಲೀಸರ ಕೈಸೇರಲಿದೆ. ಬಳಿಕ ಪ್ಲಾನಿಂಗ್ ಕೊಟ್ಟಿದ್ದು ಹೇಗೆ ,ಕಾರ್ಯ ನಿರ್ವಹಣೆ ಹೇಗೆ ದಾಖಲೆಗಳ ಪರಿಶೀಲಿಸಿ ವಿಚಾರಣೆ ಮಾಡಲಿದ್ದಾರೆ. ಆದರೇ ಯಾರೊಬ್ಬರೂ ನಿರ್ಲಕ್ಷ್ಯದ ಜವಾಬ್ದಾರಿ ಹೊತ್ತಿಕೊಳ್ಳದೇ ಸಮಜಾಯಿಷಿ ಕೊಡುತ್ತಿದ್ದಾರೆ. ಈ ಮಧ್ಯೆ ಆ ತಾಯಿ ಮಗುವಿನ ಸಾವಿಗೆ ಹೊಣೆಯಾರು ಎಂಬುದೇ ಎಲ್ಲರ ಪ್ರಶ್ನೆಯಾಗಿದ್ದು, ಮುಂದಿನಗಳಲ್ಲಿ ಸರ್ಕಾರವೇ ಇದಕ್ಕೆ ಉತ್ತರಿಸಬೇಕಿದೆ.
ಇದನ್ನೂ ಓದಿ :ಮೆಟ್ರೊ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಬಿಎಂಆರ್ಸಿಎಲ್ನಿಂದ 20 ಲಕ್ಷ ರೂ. ಘೋಷಣೆ