ಬೆಂಗಳೂರು : ಮಂಗಳವಾರ ನಾಗವಾರದಲ್ಲಿ ನಡೆದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಘಟನೆ ಸಂಬಂಧ ನಿನ್ನೆ ರಾತ್ರಿ ಎಫ್ಐಆರ್ ನಲ್ಲಿ ಯಾರ ಹೆಸರು ಇರಲಿಲ್ಲ. ಯಾರ ಹೆಸರೂ ಅವರಿಗೆ ಗೊತ್ತಿರಲಿಲ್ಲ. ಇದೀಗ ಅವರು ಹೆಸರು ಸೂಚಿಸಿ ಪೊಲೀಸರು ಎಫ್ಐಆರ್ ಮಾಡಿದ್ದಾರೆ ಎಂದು ಹೇಳಿದರು.
ಈಗ ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿಯ ಪೂಜಾ ಜೆಇ, ಚೈತನ್ಯ, ಮೆಥಾಯಿ ಕಂಪನಿಯ ವಿಕಾಸ್ ಸಿಂಗ್ ಪಿಎಂ, ಸೂಪರ್ ವೈಸರ್ ಲಕ್ಷ್ಮಿ ಪತಿ, ಬಿಎಂಆರ್ಸಿಎಲ್ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಬಿಎಂಆರ್ಸಿಎಲ್ ಎಂಜಿನಿಯರ್ ಮಹೇಶ್ ಬೆಂಡೆಕೇರಿ ಇವರ ಮೇಲೆ ದೂರು ದಾಖಲಾಗಿದ್ದು, ಕ್ರಮ ಆಗಲಿದೆ ಎಂದರು. ಇದೇ ವೇಳೆ ತಾಯಿ ಮಗುವಿನ ಸಾವಿನ ಕುರಿತು ವಿಷಾದಿಸಿದ ಅವರು, ನಿರ್ಲಕ್ಷ್ಯದಿಂದ ಪ್ರಾಣ ಹಾನಿಯಾಗಿದೆ. ಈ ರೀತಿ ಆಗಬಾರದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸ್ಯಾಂಟ್ರೋ ರವಿ ಬಂಧನ.. ಇದೇ ವೇಳೆ ಸ್ಯಾಂಟ್ರೋ ರವಿಯ ಬಂಧನ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈಗಾಗಲೇ ಅವನ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಅವನ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲಿ ಎಲ್ಲಾ ಕಡೆ ಪೊಲೀಸರು ಸರ್ಚ್ ಮಾಡಿದ್ದಾರೆ. ಆತ ಎಲ್ಲೇ ಇದ್ದರೂ ಎಳೆದುಕೊಂಡು ಬಂದೇ ಬರುತ್ತಾರೆ. ಆತನನ್ನು ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಪರಿಚಯ ಅಂತಲ್ಲ.. ಕಾಂಗ್ರೆಸ್ ಕಾಲದಲ್ಲಿ ಸಹ ಸ್ಯಾಂಟ್ರೋ ರವಿ ಕೆಲಸ ಮಾಡಿದ್ದಾನೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈತ ಸುಮಾರು 20 ವರ್ಷಗಳಿಂದ ಚಟುವಟಿಕೆ ನಡೆಸುತ್ತಿದ್ದಾನೆ. ಇದರ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ಅಂತ ಅಲ್ಲ ಎಲ್ಲಾ ಕಾಲದಲ್ಲಿ ಸಹ ಮಾಡಿದ್ದಾನೆ. ಈ ಬಗ್ಗೆ ಎಲ್ಲಾ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಕಾಂಗ್ರೆಸ್ ಯಾವ ಆರೋಪ ಮಾಡೋದಕ್ಕೂ ಹೇಸಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆದದ್ದು. ನಾವು ಯಾರೇ ಕರೆ ಬಂದರೂ ಪ್ರತಿಕ್ರಿಯೆ ಮಾಡಲೇಬೇಕು. ನಾವು ಎಲ್ಲರಿಗೂ ಸಿಗುತ್ತೇವೆ. ಆಗ ಇಂತವರೂ ಕೂಡ ಕರೆ ಮಾಡುತ್ತಾರೆ. ನಾನು ನಿಮ್ಮೆಲ್ಲರಿಗೂ ಗೊತ್ತು, ಯಾರು ಬೇಕಾದ್ರೂ ನನ್ನ ಬಳಿ ಬಂದು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಅನ್ನುವುದಕ್ಕೆ ಆಗುವುದಿಲ್ಲ. ಅನೇಕರು ಬಂದಾಗ ಫೊಟೋ ತೆಗೆಸಿಕೊಳ್ಳುತ್ತಾರೆ. ಫೋಟೋ ತೆಗೆಸಿಕೊಂಡ್ರು ಅನ್ನೋ ಕಾರಣಕ್ಕೆ ನಾವು ಅವರ ಜೊತೆ ಇರಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಎಫ್ಎಸ್ಎಲ್ ಕುರಿತು ಒಪ್ಪಂದ.. ಗುಜರಾತ್ ಪ್ರವಾಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಸಚಿವರು, ಅಹ್ಮದಾಬಾದ್ ಎಫ್ಎಸ್ಎಲ್ ವಿಧಿವಿಜ್ಞಾನ ಪರೀಕ್ಷೆ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅಲ್ಲಿನ ಸಿಎಂ ಹಾಗೂ ಗೃಹ ಸಚಿವರ ಜೊತೆ ಸಭೆ ಇದೆ. ನಾನು, ರಜನೀಶ್ ಗೋಯಲ್, ಹಿತೇಂದ್ರ ಹೋಗುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿವಿ ನಿರ್ಮಾಣ ಆಗಲಿದೆ. ಬೇರೆ ದೇಶದವರು ಬಂದು ಇಲ್ಲಿ ಕಲಿಯುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸರ ಮನವೊಲಿಕೆ ಬಳಿಕ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು