ಬೆಂಗಳೂರು: ನಮ್ಮ ಮೆಟ್ರೋ ಫೇಸ್ 3 ಹಂತದ ಹಳದಿ ಮಾರ್ಗದ ಕಾಮಗಾರಿಯಿಂದಾಗಿ, ಹಸಿರು ಮಾರ್ಗದ ಒಂದು ಮೆಟ್ರೋ ಸ್ಟೇಷನ್ ಬಂದ್ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಹೌದು, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಒಂದು ಮೆಟ್ರೋ ನಿಲ್ದಾಣವನ್ನೇ ಬಿಎಂಆರ್ಸಿಎಲ್ ವಿರೂಪಗೊಳಿಸಲು ಸಿದ್ಧತೆ ನಡೆಸಿದೆ. ಆರ್ವಿ ಮೆಟ್ರೋ ಸ್ಟೇಷನ್ ಅನ್ನು ತೆರವುಗೊಳಿಸಬೇಕಾದ ದುಸ್ಥಿತಿ ಎದುರಾಗಿದೆ.
ಆರ್ವಿ ಮೆಟ್ರೋ ಸ್ಟೇಷನ್ ಒಂದು ಭಾಗವನ್ನು ಕೆಡವೋಕೆ ನಮ್ಮ ಮೆಟ್ರೋ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆರ್.ವಿ ರಸ್ತೆಯ ಮೆಟ್ರೋ ನಿಲ್ದಾಣದ ಬಹುಭಾಗ ಕೆಡವಲಾಗುತ್ತೆ, ಇದಕ್ಕೆ ಕಾರಣ ಸಿಲ್ಕ್ ಬೋರ್ಡ್ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಕಲ್ಪಿಸೋ ನಿಲ್ದಾಣ ಇದಾಗಿರೋದ್ರಿಂದ ಇಲ್ಲೇ ಇಂಟರ್ ಚೇಂಜ್ ನಿಲ್ದಾಣ ರೂಪಿಸಲಾಗ್ತಿದೆ. ಹೀಗಾಗಿ ಆರ್ ವಿ ರಸ್ತೆ ನಿಲ್ದಾಣದ ಒಂದು ಭಾಗವನ್ನು ಸಂಪೂರ್ಣ ನೆಲಸಮ ಮಾಡಲಾಗುತ್ತೆ.
ಕಾಮಗಾರಿ ಮುಗಿಯುವವರೆಗೆ ಒಂದು ವರ್ಷದ ಕಾಲ ಈ ಮೆಟ್ರೋ ಸ್ಟೇಷನ್ ಬಂದ್ ಮಾಡಲು ಚರ್ಚೆ ನಡೆದಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮೆಟ್ರೋ ಸ್ಟೇಷನ್ ನೆಲಸಮಗೊಳಿಸಬೇಕಾದ ದುಸ್ಥಿತಿ ಬಂದಿದೆ. ಮೆಟ್ರೋ ಎರಡನೇ ಹಂತ ನಿರ್ಮಿಸುವಾಗಲೇ ಭವಿಷ್ಯದ ಬಗ್ಗೆ ಅರಿವಿದ್ದಿದ್ರೆ ಈ ಯಡವಟ್ಟಾಗ್ತಿರಲಿಲ್ಲ. ಈಗ ದಿಢೀರ್ ಆಗಿ ಮಾಮೂಲಿ ನಿಲ್ದಾಣವನ್ನು ಇಂಟರ್ ಚೇಂಜ್ ನಿಲ್ದಾಣವಾಗಿಸೋದು ಅಷ್ಟು ಸುಲಭದ ಕೆಲಸವಲ್ಲ. ಹೊಸ ಮಾರ್ಗ ಜೋಡಣೆ ಮಾಡೋ ಸಮಯದಲ್ಲಿ ಕೆಲ ಭಾಗಕ್ಕೆ ಹಾನಿಯಾಗೋದ್ರ ಜೊತೆಗೆ ಸದ್ಯ ಈ ಮಾರ್ಗದಲ್ಲಿ ಮೆಟ್ರೋ ಸಂಚರಿಸುತ್ತಿರೋದ್ರಿಂದ ಪ್ರಯಾಣಿಕರಿಗೂ ಸಂಕಷ್ಟ ಎದುರಾಗಲಿದೆ.
ಕೆಲ ದಿನಗಳ ಕಾಲ ಈ ಮೆಟ್ರೋ ನಿಲ್ದಾಣದಲ್ಲಿ ಜನರ ಓಡಾಟ ನಿಲ್ಲಿಸಲು ನಿಗಮ ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. 100 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಿರೋ ನಿಲ್ದಾಣವನ್ನೇ ಒಡೆದು ನಿರ್ಮಿಸೋ ಪರಿಸ್ಥಿತಿಯನ್ನು ಮೆಟ್ರೋ ತಂದುಕೊಂಡಿದೆ.