ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ವಿರುದ್ಧ ದಾಖಲಾಗಿದ್ದ 9 ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳನ್ನು ಅಭಿಯೋಜನೆಯಿಂದ ಕೈಬಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ರಾಮನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ 9 ಕ್ರಿಮಿಕಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಕೈ ಬಿಡಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾದ ಪ್ರಕರಣ ಇದಾಗಿದ್ದು, ಡಿಕೆಶಿ, ಸಿದ್ದರಾಮಯ್ಯ, ಡಿ.ಕೆ. ಸುರೇಶ್ ಸೇರಿ ಇತರೆ ಕೈ ನಾಯಕರ ಮೇಲಿನ ಪ್ರಕರಣವನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಚಿವ ಸಂಪುಟ ತೀರ್ಮಾನ ಏನು?:
- ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ. ಎಂ. ಹೆಚ್ ನಾಗೇಶ್ (ಹಿಂದಿನ ಜಂಟಿ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆ) ಹಣಕಾಸು ದುರುಪಯೋಗದ ಆರೋಪದ ಮೇಲೆ ಸೆಷನ್ಸ್ ನ್ಯಾಯಾಲಯ 5 ವರ್ಷಗಳ ಸಾಮಾನ್ಯ ಕಾರಾಗೃಹ ವಾಸ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಸೇವೆಯಿಂದ ವಜಾಗೊಳಿಸಲು ತೀರ್ಮಾನ
- ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆ ಮಾಡಲು ಪರಿಷ್ಕೃತ ರೂ. 391.61 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ. ಪಿಪಿಪಿಯಡಿ ಡೆಸಾರ್ಟ್ ಸಿಸ್ಟಂ ಕಂ. ಜೊತೆ ಸ್ಥಾಪನೆ.
- ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಯ ಡಾ. ಎಸ್.ಡಿ. ನಾಗಮಣಿ (ಹಿಂದಿನ ಸ್ತ್ರೀರೋಗ ತಜ್ಞರು, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ) ಲೋಕಾಯುಕ್ತ ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲಾಖಾ ಅರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನ
- ರಾಮನಗರ ಮಹಿಳಾ ತಜ್ಞೆ ಡಾ. ಉಷಾ ಕದರಮಂಡಲಗಿ ಸೇವೆಯಿಂದ ಕಡ್ಡಾಯ ನಿವೃತ್ತಿ
- ಬೆಳಗಾವಿ ವೈದ್ಯಕೀಯ ಕಾಲೇಜಿನಲ್ಲಿ 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 187 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ಕರಾವಳಿ ಪ್ರಾದೇಶಾಭಿವೃದ್ಧಿ ಮಂಡಳಿ ಎಂದು ಬದಲಾಯಿಸಲು ಒಪ್ಪಿಗೆ. ಮೂರು ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರನ್ನು ಇದಕ್ಕೆ ಸೇರಿಸಲಾಗಿದೆ. ಮಲೆನಾಡು ಪ್ರದೇಶದ 23 ತಾಲೂಕುಗಳನ್ನು ಕರಾವಳಿ ಅಭಿವೃದ್ಧಿ ಮಂಡಳಿಗೆ ಸೇರಿಸಲಾಗಿದೆ.
- ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎನ್. ಹಳ್ಳಿಗುಡಿ ಸೇವೆಯಿಂದ ವಜಾ
- ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಕೇಂದ್ರೀಕೃತ ಕಂಟ್ರೋಲ್ ರೂಂ ಒಳಗೊಂಡ 30.74 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ. ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಬಸ್ಗೆ ಕಾಯುವ ಅನಿಶ್ಚಿತತೆ ಕಡಿಮೆಗೊಳಿಸುವುದು, ಪ್ರಯಾಣ ಅವಧಿ ಕಡಿತಗೊಳಿಸುವುದು, ಸುಧಾರಿತ ಪ್ರಯಾಣ, ಅವಘಡ ನಿಯಂತ್ರಣಕ್ಕೆ ಇದು ಪೂರಕವಾಗಲಿದೆ.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲಿ 20 ಸಂಚಾರಿ ಆರೋಗ್ಯ ಘಟಕಗಳನ್ನು 3 ವರ್ಷಗಳ ಅವಧಿಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರೂ. 20.07 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಟಾನಗೊಳಿಸಲು ಅಸ್ತು.
- ಐದು ಜಿಲ್ಲಾ ಆಸ್ಪತ್ರೆಗಳಾದ ಮೈಸೂರು, ಚಿತ್ರದುರ್ಗ, ಸಿವಿರಾಮನ್ ನಗರ, ವೆನ್ ಲಾಕ್ ಆಸ್ಪತ್ರೆ, ಕೆ.ಸಿಜನರಲ್ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗು ಇತರ ಆಸ್ಪತ್ರೆಗಳಲ್ಲಿ 15 ಎಂಆರ್ ಐ ಸ್ಕ್ಯಾನ್ ಸೇವೆ ಪ್ರಾರಂಭಿಸಲು 47.41 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ
- ಕರ್ನಾಟಕ ಸೈಬರ್ ಭದ್ರತಾ ನೀತಿ 2023-24ಗೆ ಅನುಮತಿ. ರಾಜ್ಯದಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಸೈಬರ್ ಭದ್ರತೆ, ದತ್ತಾಂಶ ಖಾಸಗಿ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಈ ನೀತಿ ತರಲಾಗುತ್ತಿದೆ. ಸೈಬರ್ ಕ್ರೈಂ ನಿಯಂತ್ರಣ ಹಾಗೂ ಜಾಗೃತಿ ಇದರ ಉದ್ದೇಶವಾಗಿದೆ.
- ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೂರಕ ಪೌಷ್ಟಿಕ ಆಹಾರ ಪೂರೈಕೆ ನಿಟ್ಟಿನಲ್ಲಿ ಪಾಮೋಲಿವ್ ಎಣ್ಣೆ ಬದಲು ಸನ್ ಫ್ಲವರ್ ತೈಲ ಬಳಸಲು ತೀರ್ಮಾನ. 66.04 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ನಿರ್ಧಾರ. ಈ ಸಂಬಂಧ ಟೆಂಡರ್ ಕರೆಯಲಾಗುತ್ತದೆ.
- ಬಿಬಿಎಂಪಿ ಕಾಯ್ದೆಯನ್ನು ಇತರೆ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಿ ಸಾಧಕ ಬಾಧಕ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲು ಒಪ್ಪಿಗೆ. ಅಕ್ರಮ ಕಟ್ಟಡ ನಿರ್ಮಾಣ, ಬಯಲು ಭೂಮಿ ಸಂಬಂಧ ಆಸ್ತಿ ತೆರಿಗೆ ವಿಧಿಸುವ ಸಂಬಂಧ ಸಚಿವ ಸಂಪುಟ ಉಪಸಮಿತಿ ಪರಿಶೀಲನೆ
ಇದನ್ನೂ ಓದಿ: HIGH COURT NEWS: ಕೊರೋನಾ ನಿರ್ಬಂಧದ ನಡುವೆ ಮೇಕೆದಾಟು ಯಾತ್ರೆ.. ಸಿಎಂ, ಡಿಸಿಎಂ ಮತ್ತಿತರರ ವಿರುದ್ಧದ ಪ್ರಕರಣ ರದ್ದು