ಬೆಂಗಳೂರು: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಇಂದು ಸಭೆ ಸೇರಿ ಚರ್ಚಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೊಸಕೋಟೆ ಭಾಗದ ಕೈ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು. ಕಾಂಗ್ರೆಸ್ ನಾಯಕರು ಇಲ್ಲಿ ಮೂಡಿಬರುವ ಒಮ್ಮತದ ಮಾಹಿತಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಇಂದಿನ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಶಾಸಕರಾದ ಭೈರತಿ ಸುರೇಶ್, ಕೃಷ್ಣ ಭೈರೇಗೌಡ ಉಪಸ್ಥಿತರಿದ್ದರು.
ಸಭೆಯ ಬಳಿಕ ಮಾತನಾಡಿದ ಶಾಸಕ ಬೈರತಿ ಸುರೇಶ್, 'ಶರತ್ ಸೇರ್ಪಡೆ ಬಗ್ಗೆ ಮುಖಂಡರ ಸಭೆ ಕರೆದಿದ್ದರು. ಸಭೆ ಕರೆದು ನಮ್ಮ ಅಭಿಪ್ರಾಯ ಸಂಗ್ರಹ ಮಾಡಿದಕ್ಕೆ ಧನ್ಯವಾದ. ಒಂದು ಕಮಿಟಿ ರಚನೆ ಮಾಡ್ತೀವಿ. ಆ ಕಮಿಟಿ ಕೆಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ವರದಿ ನೀಡುತ್ತೆ. ಆ ಬಳಿಕ ಸೇರ್ಪಡೆ ಬಗ್ಗೆ ತೀರ್ಮಾನ ಮಾಡ್ತಾರೆ. ನಮಗೂ ಹೈಕಮಾಂಡ್ ಇದೆ. ಆದ್ರೆ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಮುಂದೆ ತೀರ್ಮಾನ ಮಾಡ್ತಾರೆ. ನಾವು ಸೇರ್ಪಡೆ ಪರವೂ ಇಲ್ಲ, ವಿರೋಧವೂ ಇಲ್ಲ' ಅಂತ ಹೇಳಿದರು.