ಬೆಂಗಳೂರು : ನಗರದ ಖಾಸಗಿ ಹೋಟೆಲ್ನಲ್ಲಿ ಪಕ್ಷದ ಸಂಘಟನೆ, ಬಲವರ್ಧನೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ನಾಯಕರುಗಳ ಜತೆ ಸಮಾಲೋಚಿಸಿದ್ದಾರೆ.
ಲಾಕ್ಡೌನ್ನಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಬಡವರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಈ ಅವಧಿಯಲ್ಲಿ ಉದ್ಭವಿಸಬಹುದಾದ ಸಮಸ್ಯೆ, ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯುವುದು. ಸಂಕಷ್ಟಕ್ಕೆ ಒಳಗಾಗಿರುವ ಜನರ ಸಮಸ್ಯೆಗೆ ಸ್ಪಂದನೆ ಹಾಗೂ ವೈದ್ಯಕೀಯ ಪರಿಕರಗಳ ಖರೀದಿ ಅಕ್ರಮದ ವಿರುದ್ಧ ಹೋರಾಟ ನಡೆಸುವ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆ ನಂತರ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಈಗಾಗಲೇ ಲೆಕ್ಕ ಕೊಡಿ ಅಭಿಯಾನ ಶುರುವಾಗಿದೆ. ಈಗ ಲಾಕ್‌ಡೌನ್ ಘೋಷಣೆಯಾಗಿದೆ. ಜನ ಸಾಮಾನ್ಯರಿಗೆ ಸಹಾಯ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಚರ್ಚಿಸಿದ್ದೇವೆ. ಸರ್ಕಾರದ ವೈಫಲ್ಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಸಿಎಂ ಕೂಡ ಹತಾಶರಾಗಿದ್ದಾರೆ. ಸಚಿವರ, ಆಡಳಿತದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಕೊರೊನಾ ಬಗ್ಗೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಇದೆಲ್ಲವನ್ನ ಜನತೆಯ ಮುಂದಿಡುತ್ತೇವೆ ಎಂದು ವಿವರಿಸಿದರು.