ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ, ಸಚಿವ ಸ್ಥಾನಕ್ಕ ಲಾಬಿ ಮಾಡುವ ಚರ್ಚೆ ಬದಲು ಮುಖಂಡರಿಬ್ಬರಿಗೆ ಸಚಿವ ಸ್ಥಾನ ಸಿಗದಂತೆ ಮಾಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗ್ತಿದೆ.
ಉಪಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆ ಆರಂಭಗೊಂಡಿದ್ದು, ಅದರ ನಡುವೆ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವಾಕಾಂಕ್ಷೆ ಹೊಂದಿದ ಶಾಸಕರ ಸಭೆ ನಡೆಯಿತು. ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಸೇರಿಕೊಂಡು ಸಭೆ ನಡೆಸಿದರು.
ಆದರೆ ಸಭೆಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುವ ವಿಷಯಕ್ಕಿಂತ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ದಕ್ಕಬಾರದು ಎನ್ನುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಸಿ.ಪಿ. ಯೋಗೇಶ್ವರ್ ಸಚಿವರಾಗಲು ನೀವು ಸಹಾಯ ಮಾಡಬಾರದು ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ವಿಶ್ವಾಸ ಇರಿಸಬೇಕು ಯಾವುದೇ ಕಾರಣಕ್ಕೂ ಸಿ.ಪಿ. ಯೋಗೇಶ್ವರ್ ಹೆಸರನ್ನು ಮಂತ್ರಿ ಸ್ಥಾನಕ್ಕೆ ಶಿಫಾರಸು ಆಗದಂತೆ ತಡೆಯಬೇಕು ಎನ್ನುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಒದರ ಜೊತೆಯಲ್ಲಿ ಸಚಿವ ಸಂಪುಟ ಪುನಾರಚನೆ ಆದಷ್ಟು ಬೇಗ ಮಾಡಿ ಮುಗಿಸಬೇಕು. ಈ ಕುರಿತು ಸಿಎಂಗೆ ಮನವಿ ಮಾಡಲು ಇಂದು ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎನ್ನಲಾಗಿದೆ.