ಬೆಂಗಳೂರು: ವೈದ್ಯರ ನಿಸ್ವಾರ್ಥ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ ಪರಿಷ್ಕರಣೆ ಮಾಡಿರುವುದಕ್ಕೆ ವೈದ್ಯ ವೃಂದದಿಂದ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯ ವಿದ್ಯಾರ್ಥಿಗಳ ನಿಯೋಗ ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿತು.
ಆರ್ಥಿಕವಾಗಿ ಸಂಕಷ್ಟ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಸರ್ಕಾರ ನಮ್ಮ ಮನವಿ ಪುರಸ್ಕರಿಸಿ ಶೇಕಡಾ 40ರಷ್ಟು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಕಳೆದ ಐದು ವರ್ಷಗಳಿಂದ ಸತತ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಮೂರು ತಿಂಗಳ ಹಿಂದಷ್ಟೇ ಸಚಿವ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ್ದೆವು. ಸಚಿವರು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಶಿಷ್ಯ ವೇತನ ಪರಿಷ್ಕರಿಸಿ ಪ್ರೋತ್ಸಾಹಿಸಿರುವುದಕ್ಕೆ ಧನ್ಯವಾದಗಳು ಎಂದು ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ನ ಡಾ. ಎಲ್.ದಯಾನಂದ ಸಾಗರ್ ಹೇಳಿದ್ದಾರೆ.
ಐದು ವರ್ಷಗಳಿಂದ ಸರ್ಕಾರದ ಪರಿಶೀಲನೆ ಹಂತದಲ್ಲಿದ್ದ ಪ್ರಸ್ತಾವನೆಗೆ ಸಮ್ಮತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಿಂದಿನ ಸರ್ಕಾರ ಪ್ರವೇಶ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಜೊತೆಗೆ ಇತರೆ ರಾಜ್ಯಗಳಿಗಿಂತ ಕಡಿಮೆ ಶಿಷ್ಯ ವೇತನ ನೀಡಲಾಗುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿತ್ತು. ಇದು ನಿಜಕ್ಕೂ ನನಗೆ ಸಮಾಧಾನ ತಂದಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಡಾ. ಕೆ.ಸುಧಾಕರ್ ಹೇಳಿದರು.