ಬೆಂಗಳೂರು: ಕಳೆದ ವರ್ಷ ದೇಶಕ್ಕೆ ಮಹಾಮಾರಿ ವಕ್ಕರಿಸಿ ಹಲವು ಸಮಸ್ಯೆಗೆ ಎಡೆಮಾಡಿಕೊಟ್ಟಿತು. ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಕೋವಿಡ್ ಲಸಿಕೆ ಸಂಬಂಧಿತ ಜೈವಿಕ ತ್ಯಾಜ್ಯ ನಿರ್ವಹಣೆ ಕೂಡ ದೊಡ್ಡ ಸವಾಲಾಗಿತ್ತು.
ಹೌದು, ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ ಎಲ್ಲೆಡೆ ಕೊರೊನಾ ಸೋಂಕು - ಲಸಿಕೆಯದ್ದೇ ಮಾತು. ಕೊರೊನಾ ದೇಶಕ್ಕೆ ಲಗ್ಗೆಯಿಟ್ಟ ಬಳಿಕ ಲಸಿಕೆ ಯಾವಾಗ ಸಿಗುತ್ತೆ ಎಂದು ಕಾದು ಕುಳಿತಿದ್ದವರಿಗೆ ಹೊಸ ವರ್ಷದಂದು ಸ್ವದೇಶಿ ಲಸಿಕೆ ಸಿಕ್ಕೇ ಬಿಡ್ತು. ಇದೀಗ ಮೊದಲ ಭಾಗವಾಗಿ ಆರೋಗ್ಯ ಕಾರ್ಯಕರ್ತರಿಗೆ, ಫ್ರಂಟ್ ಲೈನ್ ವಾರಿಯರ್ಸ್ಗೆ ಲಸಿಕಾ ಅಭಿಯಾನ ನಡೆದಿದೆ. ಹಾಗಾದರೆ ಕೋವಿಡ್ ಲಸಿಕೆ ಸಂಬಂಧಿತ ಜೈವಿಕ ತ್ಯಾಜ್ಯ ನಿರ್ವಹಣೆ ಹೇಗೆ ಮಾಡಲಾಗುತ್ತಿದೆ? ಇದಕ್ಕಾಗಿ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಲಾಗಿದೆಯೇ ಎನ್ನುವುದಕ್ಕೆ ಇಲ್ಲಿದೆ ಕೆಲ ಮಾಹಿತಿ.
ಕೊರೊನಾ ಸೋಂಕು ಹಿನ್ನೆಲೆ, ಕೋವಿಡ್ - ನಾನ್ ಕೋವಿಡ್ ಚಿಕಿತ್ಸೆಗಾಗಿ ಬಳಸುವ ತ್ಯಾಜ್ಯ ಸುರಕ್ಷಿತ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಬಹು ಮುಖ್ಯ ವಿಷಯ. ಲಸಿಕೆ ವಿಷಯ ಬಂದಾಗ ಅದನ್ನೂ ಕೂಡ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಆಯಾ ಆಸ್ಪತ್ರೆಗಳ ಕೆಲಸವಾಗಿದೆ. ಕೊರೊನಾ ವಿರುದ್ಧ ಹೋರಾಡಲು ಬಳಸುವ ಫೇಸ್ ಮಾಸ್ಕ್, ಪಿಪಿಇ ಕಿಟ್ನಂತೆ ಲಸಿಕೆಗೆ ಬಳಸಲುವ ಸಿರಿಂಜ್ ಬಾಟೆಲ್ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕಿದೆ.
ಓದಿ: ಕೃಷಿ ವಿವಿ ಯುವತಿಯರ ಅಪಘಾತ ಪ್ರಕರಣ: ವಿಸಿ ಪಿಎಯಿಂದ ಕಿರುಕುಳ ಆರೋಪ
ಈ ಸಂಬಂಧ ಮಾತಾನಾಡಿರುವ ಬೆಂಗಳೂರಿನ ಡಿಹೆಚ್ಓ ಡಾ. ಗೋಳೂರು ಶ್ರೀನಿವಾಸ್, ರಾಜ್ಯ ಆರೋಗ್ಯ ಇಲಾಖೆಯು ಹೊರಡಿಸಿರುವ ಎಸ್ಒಪಿ ಪ್ರಕಾರವೇ ಬಯೋ ವೇಸ್ಟೇಜ್ ವಿಲೇವಾರಿ ಮಾಡಲಾಗುತ್ತಿದೆ. ಲಸಿಕೆ ಬರುವ ಮುನ್ನವೇ ಎಲ್ಲ ಸಿಬ್ಬಂದಿಗೂ ನಾಲ್ಕು ಹಂತದಲ್ಲಿ ತರಬೇತಿ ನೀಡಲಾಗಿತ್ತು. ಬಯೋ ಮೆಡಿಕಲ್ ವೇಸ್ಟೇಜ್ಗೆ ಆಸ್ಪತ್ರೆಯ ಸ್ಟಾಫ್ ನರ್ಸ್ ಮುಖ್ಯಪಾತ್ರ ವಹಿಸುತ್ತಾರೆ. ಕೋವಿಡ್ ವ್ಯಾಕ್ಸಿನೇಷನ್ ಗಾಗಿ ವ್ಯಾಕ್ಸಿನೇಟರ್ 1, 2, 3 ಮತ್ತು 4 ಜನರು ಇದ್ದು ಅವರಿಗೆಲ್ಲ ವರ್ಚುಯಲ್ ಮೂಲಕ ತರಬೇತಿ ಸೇರಿದಂತೆ ಮ್ಯಾನುವಲ್ ತರಬೇತಿ ನೀಡಲಾಗಿತ್ತು. ಯಾವುದೇ ಅಡೆತಡೆ ಹಾಗೂ ದುಷ್ಪರಿಣಾಮ ಆಗದಂತೆ ವೈದ್ಯಕೀಯ ಜೈವಿಕ ತ್ಯಾಜ್ಯ ನಿರ್ವಹಣೆ ಕಾರ್ಯವನ್ನು ಪರಿಪೂರ್ಣವಾಗಿ ನಿಭಾಯಿಸಲಾಗುತ್ತಿದೆ ಎಂದು ತಿಳಿಸಿದರು.