ಬೆಂಗಳೂರು: ವಿಧಾನಸಭೆ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಸ್ಪೀಕರ್ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಸ್ಪೀಕರ್‌ಗೆ ಮನವಿ ಸಲ್ಲಿಸುವಂತೆ ಸೂಚಿಸಿದೆ.
ವಿಧಾನಸಭೆ ಕಲಾಪದ ನೇರ ಪ್ರಸಾರಕ್ಕೆ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ ಮೊದಲು ಅರ್ಜಿದಾರರು ಸ್ಪೀಕರ್‌ಗೆ ಮನವಿ ಸಲ್ಲಿಸಬೇಕು. ಆ ಮನವಿ ಪರಿಶೀಲಿಸಿ ಸ್ಪೀಕರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಿತು.
ಇದಕ್ಕೂ ಮುನ್ನ ವಕೀಲ ರಮೇಶ್ ನಾಯ್ಕ ವಾದ ಮಂಡಿಸಿ, ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಸ್ಪೀಕರ್ ಕ್ರಮ ಸಂವಿಧಾನ ವಿರೋಧಿಯಾಗಿದೆ. ತಮ್ಮ ಜನಪ್ರತಿನಿಧಿ ಸದನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಮತದಾರನಿಗೆ ಇದೆ ಎಂದರು.
ಕರ್ನಾಟಕ ವಿಧಾನಸಭೆ ಹಲವು ಕಾರಣಗಳಿಗೆ ಕುಖ್ಯಾತಿ ಪಡೆದಿದ್ದು, ಹಿಂದೆ ಸದನದಲ್ಲಿ ಸಚಿವರೇ ನೀಲಿ ಚಿತ್ರ ವೀಕ್ಷಿಸಿದ್ದರು. ಶಾಸಕರೊಬ್ಬರು ಬಟ್ಟೆ ಹರಿದುಕೊಂಡು ಗಲಾಟೆ ಮಾಡಿದ್ದರು. ಈ ಸಂಗತಿಗಳೆಲ್ಲ ಮಾಧ್ಯಮಗಳಿಂದಲೇ ಜನರಿಗೆ ತಿಳಿಯಿತು. ಹೀಗಾಗಿ ವಿಧಾನಸಭೆ ಕಲಾಪದ ನೇರ ಪ್ರಸಾರ ನಿರ್ಬಂಧಿಸಿರುವ ಸ್ವೀಕರ್ ಆದೇಶ ರದ್ದು ಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.