ಬೆಂಗಳೂರು: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಲ್ಯಾಪ್ ಟಾಪ್ ಹಗರಣ ಪ್ರಕರಣಕ್ಕಾಗಿ ಮುಂದೂಡಿಕೆಯಾಗಿದ್ದ ಪರಿಷತ್ ಕಲಾಪ ಪುನಾರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರೆಸಿದರು. ಪ್ರತಿಪಕ್ಷ ಸದಸ್ಯರ ಧರಣಿ ನಡುವೆ ನಿಯಮ 68 ರಡಿಯಲ್ಲಿ ಕೊರೊನಾ ಕುರಿತು ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀರಾಮುಲು ಬದಲು ಅಶ್ವತ್ಥ್ನಾರಾಯಣ ಅವರು ಉತ್ತರ ನೀಡಿದರು. ಫೀವರ್ ಕ್ಲಿನಿಕ್ಗಳನ್ನು ತೆರೆಯಲಾಗುತ್ತಿದೆ. 20 ಸಾವಿರ ಹೋಟೆಲ್ ರೂಮ್ಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕ್ವಾರಂಟೈನ್ ಮಾಡಲು 20 ಸಾವಿರ ಹೊಟೇಲ್ ರೂಮ್ ಪಡೆಯಲಾಗುವುದು. 1 ಲಕ್ಷ ಮಂದಿಗೆ ಸೋಂಕು ತಗಲುವ ಸಾಧ್ಯತೆಯಿದೆ. ಕೊರೊನಾಗೆ ಮೆಡಿಸನ್ ಇಲ್ಲ. ಔಷಧಿ ಕಂಡು ಹಿಡಿಯುವ ಪ್ರಯತ್ನ ನಡಯುತ್ತಿದೆ ಎಂದರು.
ರಾಜ್ಯದಲ್ಲಿ ವೆಂಟಿಲೇಟರ್ ಪಡೆದ ಕೊರೊನಾ ಸೋಂಕಿತ ಯಾರು ಇಲ್ಲ. ಯಾರಿಗೂ ವೆಂಟಿಲೇಟರ್ ಹಾಕುವ ಅಗತ್ಯ ಈವರೆಗೆ ಬಂದಿಲ್ಲ. ಸೋಂಕಿತರು ನಾರ್ಮಲ್ ಟ್ರೀಟ್‌ಮೆಂಟ್ ಪಡೆದು ಗುಣ ಆಗ್ತಾ ಇದ್ದಾರೆ. ಸರ್ಕಾರದಿಂದ ಒಂದು ಸಾವಿರ ವೆಂಟಿಲೇಟರ್ಗೆ ಆರ್ಡರ್ ಮಾಡಿದ್ದೇವೆ. 15 ಲಕ್ಷ ಮಾಸ್ಕ್ ಹಾಗು 5 ಲಕ್ಷ N-95 ಮಾಸ್ಕ್ಗೆ ಬೇಡಿಕೆ ಇಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇಡೀ ರಾಜ್ಯದಲ್ಲಿ ಎರಡು ಸಾವಿರ ಬೆಡ್ಗಳನ್ನು ಮೀಸಲಿಡಲಾಗಿದೆ. ಹತ್ತು ಸಾವಿರ ಮಂದಿಗೆ ಸೋಂಕು ಬಂದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಕೇಂದ್ರ ತೆರೆದಿದ್ದೇವೆ. ಹೋಮ್ ಕ್ವಾರಂಟೈನ್ ಮೇಲೆ ನಿಗಾ ವಹಿಸಿದ್ದೇವೆ. ಒಂದು ಲಕ್ಷ ಜನರಿಗೆ ಸಮಸ್ಯೆ ಆಗದ ರೀತಿ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ಶೇ.30 ರಷ್ಟು ಉಚಿತವಾಗಿ ವೆಂಟಿಲೇಟರ್ ಕೊಡುವುದಾಗಿ ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 1000 ವೆಂಟಿಲೇಟರ್ಗೆ ಈಗಾಗಲೇ ಆರ್ಡರ್ ಮಾಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಯಾವ ಯಾವ ಆಸ್ಪತ್ರೆ ಎಂಬುದನ್ನು ಘೋಷಿಸಿ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 700 ವೆಂಟಿಲೇಟರ್ ಇವೆ. ಇವಾಗ ಹೆಚ್ಚುವರಿಯಾಗಿ 1000 ವೆಂಟಿಲೇಟರ್ ಆರ್ಡರ್ ಮಾಡಿದ್ದೇವೆ ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. 17 ಸಾವಿರ ನಿಗಾ ಘಟಕ ಮಾಡಿ 12 ಸಾವಿರ ವೆಂಟಿಲೇಟರ್ ತರಿಸಿ ಎಂದು ಒತ್ತಾಯಿಸಿದರು. ಕೊರೊನಾ ಎದುರಿಸಲು ಸರ್ಕಾರ ಸಂಪೂರ್ಣವಾಗಿ ವಿಫಲ ಆಗಿದೆ. ಅಗತ್ಯ ಪ್ರಮಾಣದ ವೆಂಟಿಲೇಟರ್ ರಾಜ್ಯದಲ್ಲಿ ಇಲ್ಲ. ತಪಾಸಣೆಗೆ ಕಠಿಣ ಕ್ರಮ ಇಲ್ಲ. ಕೇರಳ ರಾಜ್ಯದಲಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದ್ದಾರೆ. ಅಲ್ಲಿ ಕೊರೊನಾ ಎದುರಿಸಲು 20 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾಗೆ ಮೀಸಲಿಟ್ಟ ಹಣ ಬರೀ 200 ಕೋಟಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಕೊರೊನಾ ಎದುರಿಸಲು ಸರ್ಕಾರ ವಿಫಲ ಆಗಿದೆ. ಕನಿಷ್ಠ 10 ಸಾವಿರ ರೂ. ಮೀಸಲಿಡಬೇಕು. ಇಲ್ಲವಾದ್ರೆ ಮುಂದೆ ಲಬೊ ಲಬೊ ಅಂತ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ಎದುರಿಸಲು ಯಾವುದೇ ಹಣಕಾಸಿನ ತೊಂದರೆ ಇಲ್ಲ. ರಾಜ್ಯ ಸರ್ಕಾರ 200 ಕೋಟಿ ರೂ. ಮೀಸಲು ಇಟ್ಟಿದೆ. ಕೇಂದ್ರ ಸರ್ಕಾರ 186 ಕೋಟಿ ರೂ. ನೀಡಿದೆ. ಕೊರೊನಾ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದರು. ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಹೆಚ್ಚು ಹಣ ಮೀಸಲಿಡಲು ಆಗ್ರಹಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.