ಬೆಂಗಳೂರು: ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಈಗಾಗಲೇ ಅರ್ಜುನ್ ಸರ್ಜಾ, ಪ್ರಶಾಂತ್ ಸಂಬರ್ಗಿ, ಮ್ಯಾನೇಜರ್ ಶಿವಾರ್ಜುನ್ ಮತ್ತು ವಿಸ್ಮಯ ಚಿತ್ರದಲ್ಲಿದ ಶ್ರುತಿ ಪರಿಚಯಸ್ಥರು ಹೀಗೆ ಎಲ್ಲರ ವಿಚಾರಣೆ ನಡೆಸಿದ್ದಾರೆ. ಆದರೆ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಯುಬಿ ಸಿಟಿ ಸೆಕ್ಯುರಿಟಿಗಳು.
ಹೌದು, ಶ್ರುತಿಯ ಆರೋಪ ಏನಾಗಿತ್ತೆಂದರೆ ಯುಬಿಸಿಟಿಯ ಒಳಗಡೆ ಶೂಟಿಂಗ್ ನಡೆಯುವ ಮುಂಚೆ ಅರ್ಜುನ್ ಸರ್ಜಾ ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂಬುದಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಯುಬಿ ಸಿಟಿಗೆ ನೇಮಕ ಮಾಡಿರುವ ಸೆಕ್ಯುರಿಟಿಗಳ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಘಟನೆ ನಡೆದು ವರ್ಷವೇ ಕಳೆದುಹೋಗಿದೆ. ಘಟನೆ ನಡೆದಾಗ ಇದ್ದ ಸೆಕ್ಯುರಿಟಿಗಳು ಈಗ ಬೇರೆ ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಸೆಕ್ಯುರಿಟಿ ಏಜೆನ್ಸಿಗೆ ಪೊಲೀಸರು ಪತ್ರ ಬರೆದು ಮಾಹಿತಿ ಕಲೆಹಾಕಿದಾಗ ಸೆಕ್ಯುರಿಟಿಗಳು ಎಲ್ಲೆಲ್ಲೋ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಉತ್ತರ ಬಂದಿದೆ.
ಇನ್ನು ಘಟನೆಯ ಕುರಿತಾಗಿ ಪೊಲೀಸರ ತನಿಖೆಗೆ ಪ್ರಮುಖವಾಗಿ ಸಾಕ್ಷಿಗಳು ಬೇಕಾಗುತ್ತವೆ. ಸಾಕ್ಷಿಗಳು ಇಲ್ಲದೇ ಹೋದರೆ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಾಗ ಕೇಸ್ ಬಿದ್ದೋಗುವ ಸಾಧ್ಯತೆ ಇದೆ. ಇದರಿಂದ ಶ್ರುತಿ ಆರೋಪ ಸುಳ್ಳು ಎಂದು ಸಾಬೀತಾಗುತ್ತದೆ. ಹೀಗಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ತಂಡ ಹರಸಾಹಸ ಪಡುತ್ತಿದೆ.
ಏನಿದೆ ದೂರಿನಲ್ಲಿ?
2016 ರ ವಿಸ್ಮಯ ಚಿತ್ರದ ಶೂಟಿಂಗ್ಗಾಗಿ ಯುಬಿ ಸಿಟಿಗೆ ಹೋಗಿದ್ದ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು. ಯಾಕೆ ಒಬ್ಬಳೇ ಕಾಯುತ್ತಿದ್ದೀಯಾ ಎಂದು ಪ್ರಶ್ನಿಸಿ, ನಾನು ಒಬ್ಬನೇ ಇದ್ದೇನೆ. ಒಂದಷ್ಟು ಕಾಲ ಸಂತೋಷವಾಗಿ ಕಾಲ ಕಳೆಯೋಣ ಎಂದಿದ್ದರು. ಅರ್ಜುನ್ ಸರ್ಜಾರ ಈ ಮಾತು ಕೇಳಿ ನಾನು ಗಾಬರಿಯಾಗಿ ಅವರ ರೂಮ್ಗೆ ತೆರಳಲು ನಿರಾಕರಿಸಿದೆ ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿಯೇ ಯುಬಿ ಸಿಟಿಯ ಸಾಕ್ಷಿ ಪೊಲೀಸರಿಗೆ ಮಹತ್ವದ್ದಾಗಿದೆ.