ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೆಜೆಟ್ ಆದೇಶದಂತೆ ಪರಿವಾರ, ತಳವಾರ ಸಮಾಜದವರಿಗೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಸಿಎಂ ಭೇಟಿಯಾದ ಎಂ ಬಿ ಪಾಟೀಲ್, ಕರ್ನಾಟಕದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತಳವಾರ ಸಮಾಜದವರಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಭಾರತ ಸರ್ಕಾರದ ಗೆಜೆಟ್ ತಿದ್ದುಪಡಿ ಕಾಯ್ದೆ- 2020ರ ಹಾಗೂ ಕರ್ನಾಟಕ ರಾಜ್ಯ ಎಸ್ಟಿ ಪಟ್ಟಿ ಕ್ರ.ಸಂ 38ರ ತಿದ್ದುಪಡಿ ರಾಷ್ಟ್ರಪತಿಗಳಿಂದ ಅನುಮೋದನೆಗೊಂಡಿರುತ್ತದೆ.
ಈ ಆದೇಶದಂತೆ ನಾಯ್ಕಡ, ನಾಯಕ ಪದಗಳ ಸಮಾನಂತರ ಪದಗಳಾದ ಪರಿವಾರ, ತಳವಾರ ಜಾತಿ ಪದಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್ವಯವಾಗುವಂತೆ ಪ್ರತ್ಯೇಕವಾಗಿ ಕ್ರ.ಸಂ 38ರಲ್ಲಿ ಸೇರ್ಪಡೆ ಮಾಡಿರುತ್ತಾರೆ. ಆದರೆ, ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರರ ಕಚೇರಿಗಳಲ್ಲಿ ಈ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೈಲೂರು ಗ್ರಾಪಂ ಸದಸ್ಯ ಸ್ಥಾನಗಳ ಹರಾಜು ಪ್ರಕರಣ: 13 ಮಂದಿ ವಿರುದ್ಧ ಎಫ್ಐಆರ್
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶದಂತೆ ಪರಿವಾರ-ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಈ ವಿಷಯ ನನ್ನ ಗಮನದಲ್ಲಿದೆ. ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.