ಬೆಂಗಳೂರು: ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇ. 16-18ರಷ್ಟು ಮೀಸಲಾತಿ ನೀಡುವಂತೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಶೇ. 16-18ರಷ್ಟು ಲಿಂಗಾಯತರು ಇದ್ದು, ಅವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿದೆ. ರಾಜ್ಯದ 6.5 ಕೋಟಿ ಜನಸಂಖ್ಯೆಯ ಪೈಕಿ ಲಿಂಗಾಯತರ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಸದ್ಯ ಸಿಗುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡ ಲಿಂಗಾಯತರಿಗೆ ಶೇ. 16-18ರಷ್ಟು ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ, ಸ್ಕಾಲರ್‌ಶಿಪ್ ಸೇರಿದಂತೆ ಎಲ್ಲಾ ಸೌಲಭ್ಯಗಳಲ್ಲಿ ನೀಡುವ ಮೂಲಕ ಲಿಂಗಾಯತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ ಎಂದಿದ್ದಾರೆ.
ಕೆಲವರ ಬೇಡಿಕೆಯಂತೆ ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, 100-200 ಕೋಟಿ ಅನುದಾನ ಒದಗಿಸಿದರೆ ಹೆಚ್ಚಿನ ಪ್ರಯೋಜನವಾಗುವದಿಲ್ಲ. ಈ ಅಭಿವೃದ್ಧಿ ನಿಗಮ ಸ್ಥಾಪನೆ ಎಂಬುದು ಕೇವಲ ಕಣ್ಣೊರೆಸುವ ತಂತ್ರವಾಗುತ್ತದೆ. ನಿಜವಾಗಿ ಲಿಂಗಾಯತರ ಆರ್ಥಿಕ, ಸಾಮಾಜಿಕ ಪ್ರಗತಿ ಸಾಧಿಸಬೇಕಾದರೆ ರಾಜ್ಯ ಸರ್ಕಾರ ಶೇ. 16-I8ರಷ್ಟು ಮೀಸಲಾತಿ ಕಲ್ಪಿಸಲು ಈ ಮೂಲಕ ವಿನಂತಿಸುತ್ತೇನೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಅಲ್ಲಿನ ಸರ್ಕಾರ ಮೀಸಲಾತಿ ನೀಡಿರುವ ಮಾದರಿಯಲ್ಲಿ ಕರ್ನಾಟಕದಲ್ಲೂ ಲಿಂಗಾಯತರಿಗೆ ಶೇ. 16ರಷ್ಟು ಮೀಸಲಾತಿ ನೀಡುವಂತೆ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ನಿನ್ನೆಯಷ್ಟೇ ಪತ್ರ ಬರೆದು ಸಿಎಂಗೆ ಒತ್ತಾಯಿಸಿದ್ದರು. ಇದೀಗ ಸಮುದಾಯದ ಒತ್ತಡದ ಮುಂದುವರೆದ ಭಾಗವಾಗಿ ಎಂ.ಬಿ.ಪಾಟೀಲ್ ಕೂಡ ಸಿಎಂಗೆ ಪತ್ರ ಬರೆದಿದ್ದಾರೆ.