ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೇಯರ್ ಗೌತಮ್ ಕುಮಾರ್ ಬಿಬಿಎಂಪಿ ಕೇಂದ್ರ ಕಚೇರಿಯ ನೈರ್ಮಲ್ಯ ಪರಿಶೀಲನೆ ನಡೆಸಿದರು.
ಈ ವೇಳೆ ಕಚೇರಿಯಲ್ಲಿ ಸ್ಯಾನಿಟೈಸರ್ ಇಲ್ಲದನ್ನು ಗಮನಿಸಿ ಗರಂ ಆದ ಮೇಯರ್, ಕೂಡಲೇ ಕಚೇರಿಗೆ ಬರುವ ಸಾರ್ವಜನಿಕರಿಗಾಗಿ ಸ್ಯಾನಿಟೈಸರ್ ಇಡುವಂತೆ ಆದೇಶಿಸಿದರು. ಅಲ್ಲದೆ ಇಂದಿನಿಂದ ಕೇಂದ್ರ ಕಚೇರಿಗೆ ಮಧ್ಯಾಹ್ನ 3ಗಂಟೆಯಿಂದ 5 ಗಂಟೆಯವರೆಗೆ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸೋಂಕು ಹರಡದಂತೆ ತಡೆಯಲು ಹೆಚ್ಚು ಜನ ಒಂದೆಡೆ ಗುಂಪು ಸೇರದಂತೆ ಪಾಲಿಕೆ ಆದೇಶಿಸಿದೆ.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಏ.8ರಂದು ಕರಗ ನಡೆಯಬೇಕೇ? ಬೇಡವೇ ಎಂದು ಅಂತಿಮ ತೀರ್ಮಾನವಾಗಲಿದೆ. ಸದ್ಯಕ್ಕೆ ಉತ್ಸವದ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಲಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 3 ಹಂತಗಳಲ್ಲಿ ಮುನ್ನಚ್ಚರಿಕೆ ವಹಿಸಲಾಗಿದೆ. ಕಚೇರಿ ಮುಂಭಾಗ ಮಾರ್ಷಲ್ಗಳ ಮೂಲಕ ಮೊದಲ ಹಂತದ ತಪಾಸಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಬಿಬಿಎಂಪಿಗೂ ನಾಳೆಯಿಂದ ಥರ್ಮಲ್ ಸ್ಕ್ಯಾನರ್ , ಸ್ಯಾನಿಟೈಸರ್ ಕಡ್ಡಾಯ ಮಾಡಲಾಗುತ್ತದೆ. ವಿವಿಧ ವಿಭಾಗಗಳ ಆಯುಕ್ತರ ಕಚೇರಿ ಮುಂಭಾಗವೂ ತಪಾಸಣೆ ಮಾಡಲಾಗುತ್ತದೆ. ನಂತರ ಕಚೇರಿಯಿಂದ ವಾಪಸ್ ಆಗುವಾಗಲೂ ತಪಾಸಣೆ ಮಾಡಲಾಗುತ್ತದೆ ಎಂದರು.
ಗಮನಸೆಳೆದ ಕೊರೊನಾ ರಂಗೋಲಿ : ಖ್ಯಾತ ರಂಗೋಲಿ ಕಲಾವಿದ ಅಕ್ಷಯ್ ಜಲಿಹಾಳ್ ಕೊರೊನಾ ಜಾಗೃತಿಗಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣ ಆವರಣದಲ್ಲಿ ರಂಗೋಲಿ ಬಿಡಿಸಿದರು. ಕೊರೊನಾ ವೈರಸ್ ಹರಡುವ ಮತ್ತು ನಿಯಂತ್ರಿಸುವ ಕುರಿತು ರಚಿಸಿದ್ದ ಈ ರಂಗೋಲಿ ಸಾರ್ವಜನಿಕರ ಗಮನ ಸೆಳೆಯಿತು.