ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ತಿಂಗಳು ಬೇಸಿಗೆ ಇರಲಿದ್ದು,ಈ ವರ್ಷ ಗರಿಷ್ಠ ಉಷ್ಣಾಂಶ ಸಾಮಾನ್ಯ ಅಥವಾ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇರಬಹುದು. ಆದರೆ, ಉ.ಕರ್ನಾಟಕ ಜಿಲ್ಲೆಗಳಲ್ಲಿ 42 ಡಿಗ್ರಿ ಸೆಂಟಿಗ್ರೇಡ್ವರೆಗೂ ತಾಪಮಾನ ಏರಲಿದೆ. ಉಳಿದೆಡೆ ಬಿಸಿಲು, ಸೆಕೆ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ, ಮಾರ್ಚ್1 ರಿಂದ ಮೇ 31 ರವರೆಗೆ ಸೆಕೆ ಇರುತ್ತದೆ. ಈ ವರ್ಷ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಆದರೆ, ಕನಿಷ್ಠ ಉಷ್ಣಾಂಶ, ಸಾಮಾನ್ಯ ಮಟ್ಟಕ್ಕಿಂತಲೂ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಾಗಲಿದೆ ಎಂದರು.
ಬೀದರ್, ಗುಲ್ಬರ್ಗಾ, ಕಲಬುರ್ಗಿ, ಬಿಜಾಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿಗೆ ಇರಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೆಚ್ಚು ಬಿಸಿಲಿರುವುದರಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಓದಿ: ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಅಭಿನಂದನೆ; ಸಿಡಿ ಬಿಡುಗಡೆ ಮಾಡಿದ ದಿನೇಶ್ ಹೇಳಿಕೆ
ಕರಾವಳಿ ಪ್ರದೇಶಗಳಲ್ಲೂ ತಾಪಮಾನ ಸಾಮಾನ್ಯ ಮಟ್ಟದಲ್ಲಿ ಇರಲಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಅಲ್ಲಲ್ಲಿ ಮೋಡಕಟ್ಟಿ ಗುಡುಗು, ಸಿಡಿಲು, ಗಾಳಿ ಸಹಿತ ಕೆಲವೆಡೆ ಮಳೆಯಾಗಲಿದೆ ಎಂದ ಅವರು, ಈ ಸಂದರ್ಭಗಳಲ್ಲಿ ಗಾಳಿ ವೇಗ ಹೆಚ್ಚಿರುವುದರಿಂದ ಮಳೆ ಬರುವ ಸಂದರ್ಭದಲ್ಲಿ ಸುರಕ್ಷಿತ ಜಾಗಗಳಲ್ಲಿ ಇರಬೇಕು.
ಕಲಬುರ್ಗಿಯಲ್ಲಿ ಗರಿಷ್ಠ ತಾಪಮಾನ 40 ರಿಂದ 42 ಡಿಗ್ರಿ ಸೆಂಟಿಗ್ರೇಡ್ ಇರಲಿದ್ದು, ಯಾದಗಿರಿ, ರಾಯಚೂರು, ಬಾಗಲಕೋಟೆ, ಗದಗದಲ್ಲಿ ತಾಪಮಾನ 38 ರಿಂದ 40 ಡಿಗ್ರಿಗೆ ತಲುಪಬಹುದು. ಬೆಂಗಳೂರಿನಲ್ಲಿ ಕೆಲವೊಮ್ಮೆ 36 -38 ಡಿಗ್ರಿ ಸೆಂಟಿಗ್ರೇಡ್ ಇರಬಹುದು. ಏಪ್ರಿಲ್, ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದರು.