ಬೆಂಗಳೂರು: ಕಿಡಿಗೇಡಿಗಳಿಂದ ಧ್ವಂಸಗೊಳಿಸಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯನ್ನು ನಾವು ಕಟ್ಟಿಕೊಡುತ್ತೇವೆ ಎಂದು ಕರ್ನಾಟಕ ಮುಸ್ಲೀಂ ಮುಖ್ಯ ಧರ್ಮಗುರುಗಳಾದ ಮೌಲನಾ ಸಹೀರ್ ಅಹಮದ್ ಖಾನ್ ಭರವಸೆ ನೀಡಿದ್ದಾರೆ.
ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಧ್ವಂಸಗೊಳಿಸಿರುವ ಮನೆಯನ್ನು ಕಂಡು ಅವರು ಬೇಸರ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಾಸಕರ ಮನೆ ನೋಡಿ ತುಂಬಾ ಬೇಸರ ಆಗುತ್ತಿದೆ. ನಾವು ನಿಮ್ಮ ಬಳಿ ಕ್ಷಮೆ ಕೇಳುತ್ತೇವೆ. ನಾವು ನಿಮ್ಮ ಜೊತೆಗಿದ್ದೇವೆ. ಇನ್ನು ಮುಂದೆ ನೀವು ನಮ್ಮ ಜೊತೆಗಿರಿ. ನಿಮಗೆ ಮನೆ ಕಟ್ಟಿಸಿ ಕೊಡುವುದಾಗಿ ನಾವು ಖುಷಿಯಿಂದ ನಿಮಗೆ ಮಾತು ಕೊಡುತ್ತೇವೆ ಎಂದು ಹೇಳಿದರು.
ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಧರ್ಮಗುರುಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಗುರುಗಳು ಒಳ್ಳೆಯ ಮನಸ್ಸಿನಿಂದ ನಿಮ್ಮ ನೋವಿನಲ್ಲಿ ನಾನಿರುತ್ತೇನೆ ಎಂದು ತಿಳಿಸಿದ್ದಾರೆ. ಮನೆಯನ್ನ ನಾನೇ ಕಟ್ಟಿಕೊಳ್ಳುತ್ತೇನೆ. ಅವರ ಆಶೀರ್ವಾದ ಜೊತೆಗಿದ್ದರೆ ಸಾಕು. ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸಕ್ಕೆ ಎಲ್ಲರನ್ನು ದ್ವೇಷಿಸಬಾರದು ಎಂದರು.