ಬೆಂಗಳೂರು: ಕರ್ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ, ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ಕಳವಳ ಹುಟ್ಟಿಸುವಂತಿದೆ. ಮೊನ್ನೆ ನಡೆದ ಡಿಸಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, ಮಂಗಳವಾರ ನಡೆದ ನೀತಿ ಆಯೋಗ ಸಭೆಯಲ್ಲೂ ಆತಂಕ ವ್ಯಕ್ತಪಡಿಸಲಾಗಿದೆ.
ತಾಯಿ ಮರಣ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣ ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿದೆ. ನೆರೆಯ ದಕ್ಷಿಣ ರಾಜ್ಯಗಳಿಗಿಂದ ಕರ್ನಾಟಕದಲ್ಲಿ ಮರಣ ಪ್ರಮಾಣ ಹೆಚ್ಚಿರುವುದು ಸರ್ಕಾರಕ್ಕೆ ತಲೆನೋವಿನ ವಿಚಾರವಾಗಿದೆ. ಈ ಸಂಬಂಧ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಈ ಬಾರಿ ತಾಯಿ ಹಾಗೂ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಗೊಳಿಸಲು ವಿಶೇಷ ಒತ್ತು ನೀಡಲು ನಿರ್ಧರಿಸಿದೆ.
ವರ್ಷಂಪ್ರತಿ ಮರಣ ಪ್ರಮಾಣ ಇಳಿಕೆ ಕಾಣುತ್ತಿದ್ದರೂ, ನೆರೆ ರಾಜ್ಯಗಳಿಗಿಂತ ಕರ್ನಾಟಕ ಹಿಂದೆ ಬಿದ್ದಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ತಾಯಿ ಮರಣ ಪ್ರಮಾಣ ಹೇಗಿದೆ?: ರಾಜ್ಯದಲ್ಲಿ ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಒಟ್ಟು 291 ತಾಯಿಯಂದಿರು ಮರಣ ಹೊಂದಿದ್ದಾರೆ. ನೋಂದಣಿಯಾದ 5,42,760 ಗರ್ಭಿಣಿಯರ ಪೈಕಿ ಸುಮಾರು 529 ತಾಯಿಯಂದಿರಲ್ಲಿ ತೀವ್ರ ರಕ್ತ ಹೀನತೆ ಪತ್ತೆ ಹಚ್ಚಲಾಗಿದೆ. ಸುಮಾರು 38,846 ತಾಯಿಯಂದಿರು ತೊಡಕಿನ ಗರ್ಭದಾರಣೆಗಳನ್ನು ಹೊಂದಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ತಾಯಿಯಂದಿರ ಮರಣಕ್ಕೆ ರಕ್ತ ಸ್ರಾವ ಪ್ರಮುಖ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಈ ವರ್ಷ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 43 ತಾಯಿಯರು ಮರಣ ಹೊಂದಿದ್ದಾರೆ. ಧಾರವಾಡದಲ್ಲಿ 41, ಬೆಳಗಾವಿಯಲ್ಲಿ 22, ಕಲಬುರಗಿಯಲ್ಲಿ 20 ಮಂದಿ ತಾಯಿಯರು ಮರಣ ಹೊಂದಿದ್ದಾರೆ.
2021-22 ಸಾಲಿನಲ್ಲಿ 759 ತಾಯಿಯರು ಮರಣ ಹೊಂದಿದ್ದರು. ಡಿಹೆಚ್ಒ ಆಡಿಟ್ನಲ್ಲಿ 355 ತಾಯಿಯರು ಮರಣ ಹೊಂದಿರುವ ಬಗ್ಗೆ ವರದಿಯಾಗಿತ್ತು.
ಶಿಶು ಮರಣ ಪ್ರಮಾಣ ಏನಿದೆ?: 2022ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ರಾಜ್ಯದಲ್ಲಿ ಐದು ವರ್ಷದೊಳಗಿನ ಸುಮಾರು 4,838 ಶಿಶುಗಳು ಮರಣ ಹೊಂದಿವೆ. ಡಿಹೆಚ್ಒರಿಂದ ಮಕ್ಕಳ ಮರಣ ಪರಿಶೀಲನಾ ವರದಿಯಲ್ಲಿ 4,006 ಶಿಶುಗಳು ಮರಣ ಹೊಂದಿರುವುದಾಗಿ ತಿಳಿಸಿದೆ.
ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 339 ಶಿಶುಗಳು ಮರಣ ಹೊಂದಿರುವುದು ವರದಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 313 ಶಿಶುಗಳು ಮರಣ ಹೊಂದಿರುವುದು ವರದಿಯಾಗಿದೆ. ಉಳಿದಂತೆ ಕಲಬುರಗಿ 299, ಕೊಪ್ಪಳ 288, ಕೋಲಾರ 288, ಮೈಸೂರು 287, ಬಳ್ಳಾರಿಯಲ್ಲಿ 245, ಶಿವಮೊಗ್ಗ ಜಿಲ್ಲೆಯಲ್ಲಿ 232 ಶಿಶುಗಳು ಮರಣ ಹೊಂದಿರುವುದು ವರದಿಯಾಗಿದೆ.
ಇದನ್ನೂ ಓದಿ: ಪಂಚಮಸಾಲಿ ಲಿಂಗಾಯತ, ಕುರುಬ ಸಮುದಾಯದ ಬೇಡಿಕೆ... ಬಿಜೆಪಿಗೆ ಆತಂಕ?